ಸಿದ್ದಾಪುರ ತಾಲೂಕಿನ ಹಲಗೇರಿ ಸಮೀಪದ ನಿಪ್ಲಿ ಫಾಲ್ಸ್​. 
ಉತ್ತರ ಕನ್ನಡ

ನಿರಂತರ ಮಳೆಗೆ ಮೈದುಂಬಿದ ಜಲಪಾತಗಳು

ವಿನಯ ಆಶೋಕ ನಾಯ್ಕ

ಸಿದ್ದಾಪುರ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಪ್ರಮುಖ ಜಲಪಾತಗಳು ಮೈದುಂಬಿ ಹರಿಯುತ್ತ ಪ್ರವಾಸಿಗರ ಮನಸೆಳೆಯುತ್ತಿವೆ.


ತಾಲೂಕಿನ ಹೆಗ್ಗರಣಿ ಸಮೀಪದ ಉಂಚಳ್ಳಿ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕುವುದನ್ನು ನೋಡುವುದೇ ಚೆಂದ. ಜಿಲ್ಲೆ, ಹೊರ ಜಿಲ್ಲೆ ಹಾಗೂ ಬೇರೆ ರಾಜ್ಯದ ಸಾವಿರಾರು ಪ್ರವಾಸಿಗರು ಆಗಮಿಸಿ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಲಗೇರಿ ಸಮೀಪದ ನಿಪ್ಲಿ ಫಾಲ್ಸ್​ನಲ್ಲಿ ಜಲಧಾರೆ ಎಂಟತ್ತು ಅಡಿ ಎತ್ತರದಿಂದ ಬೀಳುತ್ತಿರುವುದರಿಂದ ಪ್ರವಾಸಿಗರು ಜಲಧಾರೆ ಬೀಳುವ ಸಮೀಪದವರೆಗೂ ತೆರಳಿ ಆನಂದಿಸುತ್ತಿದ್ದಾರೆ.

ಸಿದ್ದಾಪುರ&ಶಿರಸಿ ರಾಜ್ಯ ಹೆದ್ದಾರಿಯ ಹದಿನಾರನೇ ಮೈಲಕಲ್​ ಸಮೀಪದ ತುಂಬರಕೋಡ ಜಲಪಾತವೂ ಪ್ರವಾಸಿಗರನ್ನು ತನ್ನತ್ತ ಆಕಷಿರ್ಸುತ್ತಿದೆ. ವಿಶೇಷವಾಗಿ ಈ ಜಲಪಾತ ಮಕ್ಕಳಿಗೆ ಹೆಚ್ಚು ಖುಷಿ ನೀಡುವಂಥದ್ದಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಹಾಗೂ ನಿಪ್ಲಿ ಫಾಲ್ಸ್​ಗೆ ಹೋಗುವ ಪ್ರವಾಸಿಗರಿಗೆ ಇದೊಂದು ಟಿಪ್ಸ್​ ಎನ್ನುವಂತಿದೆ. ಜಲಪಾತದ ಹತ್ತಿರದವರೆಗೂ ತೆರಳಿ ಸಂಭ್ರಮಿಸಬಹುದಾಗಿದೆ. ಆದರೆ, ಇಲ್ಲಿ ಮಳೆ ಬಿದ್ದರೆ ಮಾತ್ರ ಇದರ ಸೌಂದರ್ಯ ಸವಿಯಬಹುದು. ಇನ್ನು ಬುರುಡೆ ಫಾಲ್ಸ್​ ಹಾಗೂ ಶೀರ್ಲಗುಂಡಿ ಫಾಲ್ಸ್​ಗಳು ಸಹ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ.