ಸುಳಗೇರಿ ಗ್ರಾಮಸ್ಥರು ಕಾಳಿ ನದಿಯಿಂದ ನೀರು ತಂದರು.
ಕಾರವಾರ: ತಾಲೂಕಿನ ಗಡಿಯಲ್ಲಿರುವ ಸುಳಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ತುಟಾಗ್ರತೆ ಎದುರಾಗುತ್ತಿದೆ. ಗ್ರಾಮದ ಬಾವಿಗಳು ಬತ್ತಿದ್ದು, ಗ್ರಾಪಂ ಕುಡಿಯುವ ನೀರಿನ ಯೋಜನೆ ಹಾಳಾಗಿ ಹಲವು ತಿಂಗಳು ಕಳೆದಿದೆ. ಗ್ರಾಮದ ಮಹಿಳೆಯರು ನೀರಿಗಾಗಿ ಸುಮಾರು ಒಂದುವರೆ ಕಿಮೀ ದೂರ ನಡೆದು ಕಾಳಿ ನದಿಯನ್ನು ತಲುಪಬೇಕಾಗಿದೆ.
ಕೊಡಸಳ್ಳಿ ಅಣೆಕಟ್ಟೆಯ ಬುಡದಲ್ಲಿರುವ ಈ ಗ್ರಾಮವು ಜೊಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿಗೆ ಸೇರಿದೆ. ಗ್ರಾಮ ಪಂಚಾಯಿತಿ ಕೇಂದ್ರದಿಂದ ಗ್ರಾಮಕ್ಕೆ ತಲುಪಲು ಸುಮಾರು 70 ಕಿಮೀ ತೆರಳಬೇಕಾಗಿದೆ. 6 ವರ್ಷಗಳ ಹಿಂದೆ ಗ್ರಾಪಂನಿAದ ಬೋರ್‌ವೆಲ್ ಒಂದನ್ನು ಹೊಡೆಸಿ ಗ್ರಾಮದ ಪ್ರತಿ ಮನೆಗೂ ನಲ್ಲಿ ವ್ಯವಸ್ಥೆ ಮಾಡಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು.
ಕಳೆದ 8 ತಿಂಗಳ ಹಿಂದೆ ಕುಡಿಯುವ ನೀರಿನ ಪಂಪ್ ಹಾಳಾಗಿದೆ. ಗ್ರಾಮ ಪಂಚಾಯಿತಿ ಇದುವರೆಗೂ ಅದನ್ನು ರಿಪೇರಿ ಮಾಡಿಲ್ಲ. ಇದುವರೆಗೆ ಬಾವಿಗಳ ನೀರನ್ನು ನೆಚ್ಚಿಕೊಂಡು ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದರು. ಈಗ ಮಹಿಳೆಯರು ಕೊಡ ಹಿಡಿದು ನೀರಿಗಾಗಿ ನಡೆಯಬೇಕಾಗಿದೆ.
ವಿಚಿತ್ರ ಪರಿಸ್ಥಿತಿ:
ಕದ್ರಾದಿಂದ ಸುಮಾರು 30 ಕಿಮೀ ದೂರದಲ್ಲಿ ಸುಳಗೇರಿ ಗ್ರಾಮವಿದೆ. ಸುಳಗೇರಿಗೆ ವ್ಯಾವಹಾರಿಕ ಉದ್ದೇಶಗಳಿಗೆ ಕದ್ರಾ ಸಮೀಪವಾಗಿದೆ. ಆದರೆ, ಗ್ರಾಮ ಜೊಯಿಡಾ ತಾಲೂಕಿಗೆ ಸೇರಿದೆ. ಕಚೇರಿ ಕಾರ್ಯಗಳಿಗೆ ಅವರು ಜೊಯಿಡಾಕ್ಕೆ ತೆರಳಬೇಕಿದೆ. ಸುಳಗೇರಿ ಗ್ರಾಮದ ಶಾಲೆ ಹಾಗೂ ಅಂಚೆ ಇಲಾಖೆಗಳು ಯಲ್ಲಾಪುರ ತಾಲೂಕಿಗೆ ಸೇರಿವೆ. ಇಲ್ಲಿಗೆ ಅಂಚೆ ಪತ್ರಗಳು ಬಂದು ಮುಟ್ಟುವುದೂ ಕಷ್ಟವಿದೆ.
ಕಳೆದ ಜುಲೈ 2 ರಂದು ಸುಳಗೇರಿಗೆ ಹೋಗುವ ಮಾರ್ಗದಲ್ಲಿ ಗುಡ್ಡ ಕುಸಿದು ಬಿತ್ತು. ನಂತರ ಗ್ರಾಮದ ಪರಿಸ್ಥಿತಿ ಇನ್ನೂ ಅತಂತ್ರವಾಗಿದೆ. ಗ್ರಾಮಕ್ಕೆ ಕಾರವಾರದಿಂದ ತೆರಳುತ್ತಿದ್ದ ಒಂದು ಬಸ್ ಸಂಚಾರವನ್ನೂ ಬಂದ್ ಮಾಡಲಾಗಿದೆ. ರೇಶನ್ ಪಡೆಯಲು ಗ್ರಾಮಸ್ಥರು ಕಷ್ಟ ಪಡುವ ಪರಿಸ್ಥಿತಿ ಇದೆ.
ಕುಡಿಯುವ ನೀರಿನ ಪಂಪ್ ಹಾಳಾಗಿ ಸುಮಾರು 8 ತಿಂಗಳು ಕಳೆದಿದೆ. ಗ್ರಾಪಂಗೆ ಅದೆಷ್ಟು ಬಾರಿ ಮನವಿ ಮಾಡಿದೆವೋ ಗೊತ್ತಿಲ್ಲ. ಅದನ್ನು ರಿಪೇರಿ ಮಾಡುತ್ತಿಲ್ಲ. ಈಗ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ.
ನಾಗರಾಜ ನಾಯ್ಕ ಸುಳಗೇರಿ ಗ್ರಾಮಸ್ಥ