ಕುಮಟಾ ತಾಲೂಕಿನ ಮೂರೂರಿನಲ್ಲಿ ಶುದ್ಧ ನೀರಿನ ಘಟಕವನ್ನು ಒಡೆದು ಹಾನಿ ಮಾಡಿರುವುದು.(water plant destroyed) 
ಉತ್ತರ ಕನ್ನಡ

ಉದ್ಘಾಟನೆಗೂ ಮುನ್ನವೇ ನೀರಿನ ಘಟಕ ಧ್ವಂಸ Water plant destroyed

ಕುಮಟಾ: ಪ್ರಯಾಣಿಕರ ತಂಗುದಾಣ ನಿರ್ಮಿಸಲು ಸರ್ಕಾರದಿಂದ ಈಗಾಗಲೇ ನಿರ್ಮಿಸಿದ್ದ ಮತ್ತೂ ಇನ್ನೂ ಉದ್ಘಾಟನೆಗೊಂಡಿರದ ಲಕ್ಷಾಂತರ ರೂ. ವೆಚ್ಚದ ಶುದ್ಧ ನೀರಿನ ಘಟಕವನ್ನು ಧ್ವಂಸ ಮಾಡಿ (Water plant destroyed) ಬಸ್ ನಿಲ್ದಾಣ ಕಟ್ಟಿರುವ ವಿದ್ಯಮಾನವೊಂದು ಬೆಳಕಿಗೆ ಬಂದಿದೆ.
ತಾಲೂಕಿನ ಮೂರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣಕ್ಕೆ ಹೊಂದಿಕೊಂಡು ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಒಡೆದು ಹಾಕಲಾಗಿದೆ. ಇದರಲ್ಲಿದ್ದ ಬೆಲೆಬಾಳುವ ಯಂತ್ರಗಳನ್ನು ಕಿತ್ತುಹಾಕಲಾಗಿದೆ.
ಈ ಶುದ್ಧ ಕುಡಿಯುವ ನೀರಿನ ಘಟಕವಿನ್ನೂ ಜನರ ಬಳಕೆಗೆ ಮುಕ್ತವಾಗಿರಲಿಲ್ಲ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಘಟಕದಿಂದ ಹನಿ ನೀರು ಕೂಡಾ ಜನರಿಗೆ ಲಭ್ಯವಾಗಿರಲಿಲ್ಲ. ಆದರೂ ಘಟಕವನ್ನು ಎಲ್ಲರೆದುರೇ ನಾಶ ಮಾಡಲಾಗಿದೆ ಎನ್ನುವುದು ಗಮನಿಸತಕ್ಕ ಸಂಗತಿ.
ಈ ನಡುವೆ ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ನವರಿಂದ 2024-25 ನೇ ಸಾಲಿನಲ್ಲಿ 10 ಲಕ್ಷರೂ. ಕೊಡುಗೆಯಡಿಯಲ್ಲಿ ಬಸ್ ನಿಲ್ದಾಣವನ್ನು ಇಲ್ಲಿ ನಿರ್ಮಿಸಲಾಯಿತು.
ಈ ಕಾಮಗಾರಿಯ ಸಂದರ್ಭದಲ್ಲಿ ಜಾಗದ ಕೊರತೆ ನೀಗಿಸಲು ಪಕ್ಕದಲ್ಲಿದ್ದ ಶುದ್ಧ ನೀರಿನ ಘಟಕವನ್ನು ಅರ್ಧದಷ್ಟು ಕಿತ್ತು ಜಾಗ ಮಾಡಿಕೊಂಡು ಕಟ್ಟಡ ನಿರ್ಮಿಸಿರುವುದಾಗಿ ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ಕಣ್ಣೆದುರೇ ಇಷ್ಟೆಲ್ಲ ನಡೆದಿರುವುದಾರೂ ಹೇಗೆ?. ಶುದ್ಧ ಕುಡಿಯುವ ನೀರಿನ ಘಟಕಕ್ಕಿಂತ ಯಾವತ್ತೂ ಶಟರ್ ಹಾಕಿರುವ ಬಸ್ ನಿಲ್ದಾಣವೇ ಮುಖ್ಯವಾಯಿತೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.