ಕಾರವಾರ ವಾಣಿಜ್ಯ ಬಂದರು  
ಉತ್ತರ ಕನ್ನಡ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಬಂದರಿನ ವಹಿವಾಟು ಇಳಿಮುಖ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕಾರವಾರ ಬಂದರಿನ ಮೇಲೂ ಬೀಳುವ ಆತಂಕವಿದೆ. ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಡಾಂಬರು ಎಂದರೆ ಬಿಟುಮಿನ್ ವಹಿವಾಟು ಹೆಚ್ಚಾಗಿ ನಡೆಯುತ್ತಿತ್ತು. ಇಲ್ಲಿ ಬಿಟುಮಿನ್ ಟ್ಯಾಂಕರ್‌ಗಳಿದ್ದು, ಇಲ್ಲಿಂದ ಅರ್ಧ ಕರ್ನಾಟಕ್ಕೆ ಡಾಂಬರು ಪೂರೈಕೆಯಾಗುತ್ತಿದೆ. ಇದರಿಂದ ಬಂದರಿಗೆ 10 ರಿಂದ 12 ಕೋಟಿ ರೂ. ನೇರ ಆದಾಯ ಬಂದರೆ, ಕಸ್ಟಮ್ಸ್, ಜಿಎಸ್‌ಟಿ ಸೇರಿ ನೂರು ಕೋಟಿಗೂ ಅಧಿಕ ಆದಾಯ ಬರುತ್ತದೆ. ಜೊತೆಗೆ ಉದ್ಯೋಗಗಳೂ ಸೃಷ್ಟಿಯಾಗಿವೆ. 
ಹೆಚ್ಚಾಗಿ ಇರಾನ್‌ನಿಂದ ಬಿಟುಮಿನ್ ಹಡಗುಗಳು ಬರುತ್ತಿದ್ದವು. ಈಗ ಎರಡು ವಾರದಿಂದ ಯಾವುದೇ ಬಿಟುಮಿನ್ ಹಡಗು ಕಾರವಾರಕ್ಕೆ ಬಂದಿಲ್ಲ. ಯುದ್ಧ ಪರಿಸ್ಥಿತಿ ಮುಂದುವರಿದರೆ ಕಾರವಾರ ಬಂದರಿನ ಆದಾಯ ಇಳಿಯಲಿದೆ ಎಂದು ಅಽಕಾರಿಗಳು ತಿಳಿಸಿದ್ದಾರೆ. ಸದ್ಯ ಕಾರವಾರದಲ್ಲಿ ಬಿಟುಮಿನ್ ಸಂಗ್ರಹ ಇದೆ. ಚೀನಾದಿಂದಲೂ ಇದೇ ವಾಹ ಇನ್ನೊಂದು ಹಡಗು ಬರುತ್ತಿದೆ. ಯುದ್ಧ ಪರಿಸ್ಥಿತಿ ಮುಂದುವರಿದರೆ ಸಮಸ್ಯೆಯಾಗಲಿದೆ ಎಂದು ಬಂದರು ಇಲಾಖೆ ಎಇಇ ತಾರಾನಾಥ ರಾಠೋಡ ತಿಳಿಸಿದ್ದಾರೆ.

ಬಿಟುಮಿನ್‌ ದರ ಏರಿಕೆ: 

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಬಿಟುಮಿನ್‌ ಕೊರತೆ ಉಂಟಾಗುವ ಆತಂಕವಿದೆ. ಇದರಿಂದ ಬಿಟುಮಿನ್‌ ದರದಲ್ಲಿ ದಿಢೀರ್‌ ಏರಿಕೆ ಕಂಡುಬರುತ್ತಿದೆ. ಪ್ರತಿ ದಿನ  6 ರಿಂದ 8 ರೂ. ಏರಿಕೆ ಕಂಡು ಬರುತ್ತಿದೆ. ನಾಲ್ಕು ದಿನಗಳ ಹಿಂದೆ ಪ್ರತಿ ಕೆಜಿ ಬಿಟುಮಿನ್‌ ದರ 42  ರೂ. ಇತ್ತು. ಈಗ  ಬಿಟುಮಿನ್‌ ದರ ಪ್ರತಿ ಕೆಜಿಗೆ  67 ರೂ.ಗೆ ತಲುಪಿದೆ. ಇದರಿಂದ ಗುತ್ತಿಗೆದಾರರಿಗೆ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ರಸ್ತೆ ದುರಸ್ತಿ ಮುಂತಾದ ಅಭಿವೃದ್ಧಿ ಕಾರ್ಯಗಳೂ ಸ್ಥಗಿತವಾಗುವ ಸಾಧ್ಯತೆ ಇದೆ.