- ಎಸ್‌ಟಿ ಸಮುದಾಯಗಳಿಗೆ ಶೇ.7 ಹಾಗೂ ಎಸ್‌ಸಿ ಸಮುದಾಯಗಳಿಗೆ ಶೇ17 ರಷ್ಟು ಮೀಸಲಾತಿ ನೀಡಲಿ
- ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಹೇಳಿಕೆ
ಕಾರವಾರ: ರಾಜ್ಯದಲ್ಲಿ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯದಲ್ಲಿ ನ್ಯಾಯಯುತ ಮೀಸಲಾತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ವಹಿಸದೇ ಇದ್ದಲ್ಲಿ ದಮನಿತ ಸಮುದಾಯಗಳ ಆಕ್ರೋಶ ಎದುರಿಸಬೇಕಾದೀತು ಎಂದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯಿಂದ ನಗರದಲ್ಲಿ ಸಮಾಜದ ಪ್ರಮುಖರ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೈಕೋರ್ಟ್ ತೀರ್ಪಿನ ನಂತರ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡಗಳ 51 ಜಾತಿಗಳಿಗೆ ಶೇ.7 ಹಾಗೂ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಶೇ.17 ರಷ್ಟು ಮೀಸಲಾತಿಯನ್ನು ನಿಗದಿ ಮಾಡಿ, 2022 ರಲ್ಲಿ ಆಗಿನ ಬಿಜೆಪಿ ಸರ್ಕಾರ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಆದರೆ, ಅದು ಊರ್ಜಿತವಾಗಬೇಕಾದರೆ ಭಾರತ ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಬೇಕಾಗಿದೆ. ಅದಕ್ಕಾಗಿ 2023 ರ ಮಾರ್ಚ್ನಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದೆ. ಆದರೆ, ಇದುವರೆಗೂ ಸಂವಿಧಾನದಲ್ಲಿ ಸೇರ್ಪಡೆ ಮಾಡುವ ಕಾರ್ಯವಾಗಿಲ್ಲ. ಈ ಸಂಬಂಧ ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಅದಕ್ಕೂ ಪ್ರತಿಕ್ರಿಯೆ ಬಂದಿಲ್ಲ.
ಈಗ ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕಾಯ್ದೆಯ ತಿದ್ದುಪಡಿಯಂತೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇಂದಿರಾ ಸುಹಾನಿ ಕೇಸ್ ಆಧರಿಸಿ ಪರಿಶಿಷ್ಟ ಪಂಡಗದವರ ಮೀಸಲಾತಿಯನ್ನು ಶೇ.3 ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15 ಕ್ಕೆ ನಿಗದಿ ಮಾಡಲಾಗಿದೆ. ಇದರಿಂದ ರಾಜ್ಯದ 72 ಸಾವಿರಕ್ಕೂ ಅಽಕ ಹುದ್ದೆಗಳ ಹೊಸ ನೇಮಕಾತಿಗಳಲ್ಲಿ ಪರಿಶಿಷ್ಟ ಪಂಡಗಳಿಗೆ 2888 ಹುದ್ದೆಗಳು, ಎಸ್ ಸಿಗಳಿಗೆ 1444 ಹುದ್ದೆಗಳು ನಷ್ಠವಾಗಲಿವೆ. ಉನ್ನತ ಶಿಕ್ಷಣದಲ್ಲಿ ಎರಡೂ ಸಮುದಾಯಗಳಿಗೆ ಸುಮಾರು 6 ಸಾವಿರ ಹುದ್ದೆಗಳು ಕಡಿಮೆಯಾಗಲಿವೆ.
ರಾಜ್ಯದ ಎಸ್‌ಸಿ, ಎಸ್‌ಟಿಗಳಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಜಿಲ್ಲೆಯ ಯಾವುದೇ ಸಂಸದರು ಧ್ವನಿ ಎತ್ತುತ್ತಿಲ್ಲ. ಅವರದ್ದೇ ಕೂಸಾಗಿರುವ ಎಸ್‌ಸಿ, ಎಸ್‌ಟಿ ಮೀಸಲಾತಿ ಕಾಯ್ದೆಯ ಜಾರಿಯ ಬಗ್ಗೆ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮೌನ ವಹಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಸಮಾಧಾನ ಎಂದರೆ ಮಾಜಿ ಪ್ರಧಾನಿ ದೇವೆಗೌಡ ಅವರು ಈ ವಿಷಯವನ್ನು ಪ್ರಧಾನಿ ಅವರ ಬಳಿ ಮಾತನಾಡುವುದಾಗಿ ಹೇಳಿದ್ದಾರೆ. ನಾನು ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ, ಸಮಾಜದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಗಳಿಗೆ ಭೇಟಿಯಾಗಿ ಎಸ್‌ಸಿ, ಎಸ್‌ಟಿ ಸಮುದಾಯದ ಕಾಲೇಜ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಿದ್ದೇನೆ. ರಾಜ್ಯ ಸರ್ಕಾರ ಸರ್ವ ಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ದು ಈ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮಾಜದ ಪ್ರಮುಖರಾದ ನರಸಿಂಹಯ್ಯ, ಹನುಮಂತರಾಯಪ್ಪ, ಪ್ರಕಾಶ ದೇಸಾಯಿ, ನಾಗರಾಜ ತಳವಾರ, ಸುರೇಶ ಕಲ್ಲೊಳ್ಳಿ, ಭೀಮ್ಶಿ ವಾಲ್ಮೀಕಿ, ಗಣೇಶ ಬಿಷ್ಠಣ್ಣನವರ್, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಜಿ.ಡಿ. ಮನೋಜೆ,ಜಗದೀಶ ಓಲೆಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟಕರ್ ಸುದ್ದಿಗೋಷ್ಠಿಯಲ್ಲಿದ್ದರು.
ಆರ್‌ಎಸ್‌ಎಸ್ ಕ್ಷಮೆ ಕೇಳಬೇಕು
ರಾಮ ಮಂದಿರ ಹುಂಡಿಯ ಹಣ ಕಳ್ಳತನ ಪ್ರಕರಣದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರ ಪಾತ್ರ ಇರುವುದು ಎಸ್‌ಐಟಿ ತನಿಖೆಯಲ್ಲೇ ತಿಳಿದುಬಂದಿದೆ. ಇದರಿಂದ ಆರ್‌ಎಸ್‌ಎಸ್ ಸರಸಂಘ ಸಂಚಾಲಕರು ದೇಶದ ಜನರ ಕ್ಷಮೆ ಕೇಳಬೇಕು. ಪ್ರಧಾನಿ, ಗೃಹ ಸಚಿವರು ಹಾಗೂ ಯುಪಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಆರ್‌ಎಸ್‌ಎಸ್, ವಿಎಚ್‌ಪಿಗಳು ಈಗ ರಾಮನ ಹೆಸರಿಗೆ ಅಪಚಾರ ಎಸಗಿರುವುದು ಸಾಬೀತಾಗಿದೆ. ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ನ್ನು ಪ್ರಧಾನಿ ಮೋದಿ ಅವರೇ ರಚನೆ ಮಾಡಿದ್ದರು. ಟ್ರಸ್ಟ್ನಲ್ಲಿ ಆರ್‌ಎಸ್‌ಎಸ್ ಆಹ್ವಾನಿತರಿದ್ದರು. ಕೇಂದ್ರ ಸರ್ಕಾರದ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಽಕಾರಿಗಳಿದ್ದರು. ಅಷ್ಟೇ ಅಲ್ಲದೇ, ಮೋದಿ ಅವರ ಮಾಜಿ ಆಪ್ತ ಸಹಾಯಕರೂ ಟ್ರಸ್ಟ್ ಸದಸ್ಯರಾಗಿದ್ದರು.