ಕೆಡಿಸಿಸಿ ಬ್ಯಾಂಕ್ ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮೋಹನ ನಾರಾಯಣ ನಾಯಕ ವಿಜಯಿಯಾದರು. ಉಪ ವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ ಪ್ರಮಾಣಪತ್ರ ವಿತರಿಸಿದರು.
- ಕೆಡಿಸಿಸಿ ಬ್ಯಾಂಕ್ ಚುನಾವಣೆ
- ಇನ್ನೂ ಎರಡು ಸ್ಥಾನಗಳ ಕೌಂಟಿಂಗ್ ಬಾಕಿ
- ನಿರ್ದೇಶಕ ಸ್ಥಾನಕ್ಕೆ ಮೋಹನ ನಾಯಕ ಆಯ್ಕೆ
- 10ಕ್ಕೆ ಏರಿದ ಹೆಬ್ಬಾರ್ ಬಣದ ಸದಸ್ಯರ ಸಂಖ್ಯೆ
- ಆಡಳಿತ ಮಂಡಳಿ ರಚನೆ ಇನ್ನಷ್ಟು ವಿಳಂಬ
ಶಿರಸಿ: ಧಾರವಾಡ ಉಚ್ಛ ನ್ಯಾಯಾಲಯದ ಸೂಚನೆಯ ಮೇರೆಗೆ ಕೆಡಿಸಿಸಿ ಬ್ಯಾಂಕ್‌ನ ಮತ ಎಣಿಕೆಯ ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನದ ಮತ ಎಣಿಕೆ ಶುಕ್ರವಾರ ನಡೆದಿದೆ. ಮೋಹನ ನಾರಾಯಣ ನಾಯಕ ವಿಜಯಿಯಾಗಿದ್ದು, ಇದರಿಂದಾಗಿ ಬ್ಯಾಂಕ್‌ನಲ್ಲಿ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಮೋಹನ ನಾಯಕ 120 ಮತಗಳನ್ನು ಪಡೆದು ವಿಜಯಿಯಾದರೆ ಹಾಲಿ ನಿರ್ದೇಶಕ ಮೋಹನದಾಸ ನಾಯಕ 105 ಮತಗಳನ್ನು ಪಡೆದು ಪರಾವಭವಗೊಂಡರು. ಇನ್ನೋರ್ವ ಸ್ಪರ್ಧಿ ವಸಂತ ನಾಯಕ 24 ಮತಗಳನ್ನು ಪಡೆದರೆ ಸರಸ್ವತಿ ಎನ್. ರವಿ 5 ಮತಗಳನ್ನು ಪಡೆದು ಪರಾಭವಗೊಂಡರು. ಶಿರಸಿ ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ ಚುನಾವಣಾ ಅಧಿಕಾರಿಯಾರಿಯಾಗಿ ಕಾರ್ಯ ನಿರ್ವಹಿಸಿದರು. ಸಿದ್ದಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತ ಕ್ಷೇತ್ರ ಹಾಗೂ ಗ್ರಾಹಕರ ಸಹಕಾರಿ ಸಂಘಗಳ ಮತ್ತು ಸಂಸ್ಕರಣಾ ಸಹಕಾರಿ ಸಂಘಗಳ ಮತ ಕ್ಷೇತ್ರದ ಮತ ಎಣಿಕೆ ಇನ್ನೂ ನಡೆಯಬೇಕಿದ್ದು, ನ್ಯಾಯಾಲಯದ ಆದೇಶಕ್ಕಾಗಿ ಕಾಯಲಾಗುತ್ತಿದೆ.
ಆಡಳಿತ ಮಂಡಳಿ ಇಲ್ಲದೇ ಸಮಸ್ಯೆ
ಕೆಡಿಸಿಸಿ ಬ್ಯಾಂಕಿಗೆ ಅ. 25ರಂದೇ ಚುನಾವಣೆ ಮುಗಿದಿದ್ದರು, ಇನ್ನೂ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಎಲ್ಲ 16 ಸ್ಥಾನಗಳ ಮತ ಎಣಿಕೆ ಪೂರ್ಣಗೊಳ್ಳದವರೆಗೂ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 16 ನಿರ್ದೇಶಕ ಸ್ಥಾನದಲ್ಲಿ 14 ಸ್ಥಾನಗಳ ಮತ ಎಣಿಕೆ ಮುಗಿದು ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ. 10 ಸ್ಥಾನಗಳಲ್ಲಿ ಶಿವರಾಮ ಹೆಬ್ಬಾರ್ ಬೆಂಬಲಿಗರು, 4 ಸ್ಥಾನಗಳಲ್ಲಿ ಮಂಕಾಳ ವೈದ್ಯ ಬೆಂಬಲಿಗರು ಮುಂಚೂಣಿಯಲ್ಲಿದ್ದಾರೆ.
ಆಡಳಿತ ಮಂಡಳಿ ಅನುಷ್ಠಾನಗೊಳ್ಳದ ಪರಿಣಾಮವಾಗಿ ರೈತರು ಸಮಸ್ಯೆ ಎದುರಿಸಬೇಕಾಗಿದೆ. ಮಾಧ್ಯಮಿಕ ಸಾಲ ಸೇರಿದಂತೆ ಅನೇಕ ಅಗತ್ಯ ಸಾಲಗಳು ದೊರೆಯುತ್ತಿಲ್ಲ. ಸಾಲ ನೀಡದ ಕಾರಣ 74 ಬ್ರಾೃಂಚ್‌ಗಳಲ್ಲಿ ವ್ಯವಹಾರ ಕಡಿಮೆಯಾಗಿದ್ದು, ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಇನ್ನು ಕೇವಲ ಮೂರು ತಿಂಗಳಲ್ಲಿ ಆರ್ಥಿಕ ವರ್ಷ ಮುಗಿಯಲಿದ್ದು, ಹಣಕಾಸು ವ್ಯವಹಾರವೇ ಕಡಿಮೆಯಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ತುರುಸು ಇದ್ದರೂ ಸಹ, ನ್ಯಾಯಾಲಯದಿಂದ ಮತದಾನದ ಹಕ್ಕು ತಂದರೂ ಸಹ ಮತ ಎಣಿಕೆ ದಿನದಂದೇ ಎಲ್ಲವೂ ಘೋಷಣೆಯಾಗುತ್ತಿತ್ತು. ಆದರೆ ಈ ಬಾರಿ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಕೆಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಣಮಿಸಿದ ಕಾರಣ ನ್ಯಾಯಾಲಯಕ್ಕೆ ಹೋದ ಪ್ರಕರಣಗಳು ಈ ವರ್ಷ ಜಾಸ್ತಿ ಆಗಿದೆ. ಆಡಳಿತ ಮಂಡಳಿ ರಚನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ರೈತರಿಗೆ ಹಾಗೂ ಬ್ಯಾಂಕಿಗೆ ಇಬ್ಬರಿಗೂ ತೊಂದರೆ ಖಚಿತವಾಗಿದೆ. ಕಾರಣ ಆದಷ್ಟು ಶೀಘ್ರದಲ್ಲಿ ಆಡಳಿತ ಮಂಡಳಿ ರಚನೆಯಾಗಬೇಕಿದೆ.
ಹೆಚ್ಚಿದ ಮಾಧ್ಯಮಿಕ ಸಾಲದ ಚಿಂತೆ
ಕೆಡಿಸಿಸಿ ಬ್ಯಾಂಕ್ ನಲ್ಲಿ ಆಡಳಿತ ಮಂಡಳಿ ವಿಚಾರವಾಗಿ ರೈತರಿಗೆ ಮಾಧ್ಯಮಿಕ ಸಾಲದ ಚಿಂತೆ ಹೆಚ್ಚಿದೆ. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಸಾಲ ಮಂಜೂರಾತಿ ನೀಡಲಾಗುತ್ತದೆ. ಆದರೆ ಈ ಬಾರಿ ಸಾಲದ ಅರ್ಜಿ ಕಳಿಸಿದರೂ ಪ್ರಯೋಜನ ಆಗಿಲ್ಲ ಎನ್ನುವಂತಿದೆ. ವಿಮಾ ಕಂಪನಿಯ ವಿರುದ್ಧವೂ ಹೋರಾಟ ಮಾಡಲು ಆಡಳಿತ ಮಂಡಳಿ ಅಗತ್ಯವಿದೆ. ಅಲ್ಲದೇ ಇದೇ ರೀತಿ ಮುಂದುವರಿದಲ್ಲಿ ಬೆಳೆ ಸಾಲದ ಸಂದರ್ಭದಲ್ಲೂ ಸಮಸ್ಯೆ ಆಗುವ ಸಾಧ್ಯತೆಯಿದೆ.