ಗೋಕರ್ಣದಲ್ಲಿ ಐದು ದಿನ ಆಯೋಜಿತವಾದ ವಿರಾಟ್ ಹಿಂದು ಸಮಾಜೋತ್ಸವ ಆಮಂತ್ರಣ ಪತ್ರಿಕೆಯನ್ನು ಸಮಿತಿ ಪ್ರಮುಖರು ಬಿಡುಗಡೆ ಮಾಡಿದರು.
ವಿಜಯವಾಣಿ ಸುದ್ದಿಜಾಲ ಗೋಕರ್ಣ
ಜಾತಿ, ಪಂಥಗಳ ಭೇದ ಭಾವಗಳಿಲ್ಲದೆ ಎಲ್ಲ ಹಿಂದೂ ಬಾಂಧವರನ್ನು ಏಕ ವೇದಿಕೆಯಲ್ಲಿ ಸಂಘಟಿಸುವ ಉದ್ದೇಶದಿಂದ ಐದು ದಿನಗಳ ವಿರಾಟ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಾಂಧವರು ಭಾಗವಹಿಸಬೇಕು ಎಂದು ಸಮಾಜೋತ್ಸವದ ಹೋಬಳಿ ಸಮಿತಿ ಅಧ್ಯಕ್ಷ ವೇ.ಉದಯ ಮಯ್ಯರ ಮನವಿ ಮಾಡಿದರು.
ಇಲ್ಲಿನ ಶ್ರೀಕೈವಲ್ಯ ಮಠದಲ್ಲಿ ಜ.16 ರಿಂದ 20ರ ವರೆಗೆ ಐದು ದಿನ ಆಯೋಜಿಸಲಾದ ಸಮಾರಂಭಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ.16ರಿಂದ ಸಮಾಜೋತ್ಸವ ನಿಮಿತ್ತ ಕ್ಷೇತ್ರದ ವೈದಿಕರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಅಪರಾಹ್ನ 4 ಗಂಟೆಯಿಂದ ಬೈಕ್ ರ‌್ಯಾಲಿ ನಂತರ ಶ್ರೀ ಭದ್ರಕಾಳಿ ದೇಗುಲದಲ್ಲಿ ಪುಷ್ಪ ಪೂಜೆ ಏರ್ಪಾಟಾಗಿದೆ. ಜ.17 ಮತ್ತು 18ರಂದು ಧಾರ್ಮಿಕ ಹವನ ಮತ್ತು ಮಧ್ಯಾಹ್ನ 3 ಗಂಟೆಯಿಂದ ಕ್ರೀಡೋತ್ಸವವಿದೆ. ಜ.19ರಂದು ಕ್ಷೇತ್ರದ ಎಲ್ಲ ಪ್ರಧಾನ ಮಂದಿರಗಳಲ್ಲಿ ಪೂಜೆ, ಸಂಜೆ 5 ಗಂಟೆಯಿಂದ ಸಭಾ ಕಾರ್ಯಕ್ರಮದ ಉದ್ಘಾಟನೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 9 ಗಂಟೆಗೆ ಕಲಾ ಸಂಗಮ ತಂಡದಿಂದ ಛತ್ರಪತಿ ಶಿವಾಜಿ ಐತಿಹಾಸಿಕ ನಾಟಕ ಪ್ರದರ್ಶನವಿದೆ ಎಂದರು.
ಜ.20ರಂದು ಮಧ್ಯಾಹ್ನ 3.30ರಿಂದ ಶ್ರೀಮಾರುತಿ ಗುಡಿಯಿಂದ ಮುಖ್ಯ ಮಾರ್ಗಗಳ ಮೂಲಕ ಕಡಲ ತೀರದವರೆಗೆ ಬೃಹತ್ ಶೋಭಾಯಾತ್ರೆ ನಡೆಯುವುದು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮುಖ್ಯ ವಕ್ತಾರರಾಗಿ ಬೌದ್ಧಿಕ ಉಪನ್ಯಾಸ ನೀಡುವರು. ಅತಿಥಿಗಳಾಗಿ ಮಂಡಲ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಗೋವಿಂದ ಭಟ್ಟ ಭಾಗವಹಿಸುವರು. ಹೋಬಳಿ ಸಮಿತಿ ಗೌರವಾಧ್ಯಕ್ಷ ನಾಗರಾಜ ನಾಯಕ ಅಡಿಗೋಣ, ಅಧ್ಯಕ್ಷ ವೇ.ಉದಯ ಮಯ್ಯರ್, ಉಪಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ಮಂಡಲ ಸಮಿತಿ ಅಧ್ಯಕ್ಷ ಗೋವಿಂದ ಎನ್.ಗೌಡ, ಉಪಾಧ್ಯಕ್ಷ ಶಂಕರ ಹುಲಿಯಾ ಆಗೇರ ಮತ್ತು ಕಾರ್ಯದರ್ಶಿ ಮಹೇಶ ಎಸ್.ನಾಯ್ಕ ಉಪಸ್ಥಿತರಿರುವರು. ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ವೇ.ಉದಯ ಮಯ್ಯರ್, ವೇ.ಗಣೇಶ್ವರ ದೀಕ್ಷಿತ್, ಮಹೇಶ ನಾಯ್ಕ, ಗಣಪತಿ ಎಂ.ಅಡಿ, ನಿತ್ಯಾನಂದ ಶೆಟ್ಟಿ, ಸುವರ್ಣ ಪ್ರಸಾದ, ಪ್ರಕಾಶ ಗೌಡ, ಕಾರ್ತಿಕ ಅಡಿ,ನಾಗೇಶ ಗೌಡ, ಶೇಖರ ನಾಯ್ಕ ಇತರರಿದ್ದರು.