ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಪರಿಹಾರವಾಗದ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಬೀಗ ಹಾಕಲು ಮುಂದಾದ ಘಟನೆ ತಾಲೂಕಿನ ಗಾಢಸಾಯಿಯಲ್ಲಿ ನಡೆದಿದೆ.  
ಉತ್ತರ ಕನ್ನಡ

ಗ್ರಾಪಂಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಕಾರವಾರ: ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಪರಿಹಾರವಾಗದ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಬೀಗ ಹಾಕಲು ಮುಂದಾದ ಘಟನೆ ತಾಲೂಕಿನ ಗಾಢಸಾಯಿಯಲ್ಲಿ ನಡೆದಿದೆ.
ಗಾಢಸಾಯಿ ಗ್ರಾಪಂ ವ್ಯಾಪ್ತಿಯ ಸುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಪದೇ ಪದೇ ಕೈ ಕೊಡುತ್ತಿದ್ದು, ಈಗ ಹಾಳಾಗಿ ದಿನ ಕಳೆದಿದೆ. ದಿನನಿತ್ಯದ ಜೀವನಕ್ಕೆ ತೊಂದರೆಯಾಗಿದೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅದನ್ನು ಪರಿಹರಿಸಲು ಗ್ರಾಪಂನಲ್ಲಿ ಪಿಡಿಒ ಕೂಡ ಇಲ್ಲ ಗ್ರಾಮಸ್ಥರ ಸಮಸ್ಯೆ ಕೇಳುವವರೇ ಇಲ್ಲವಾದಲ್ಲಿ ಗ್ರಾಪಂ ಕಚೇರಿ ಏಕೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹೆಸ್ಕಾಂ ಅಧಿಕಾರಿಗಳು ಆಗಮಿಸಿ ಒಂದು ದಿನದಲ್ಲಿ ಹೊಸ ಟ್ರಾನ್ಸ್ಫರ್ಮರ್ ಅಳವಡಿಸಿ, ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ತಾಪಂ ಅಧಿಕಾರಿ ಸಂದೀಪ ಕೊಠಾರಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಇಂಜಿನಿಯರ್ ಪ್ರೀತಿ ನಾಗೇಕರ್ ಆಗಮಿಸಿ ಕುಡಿಯುವ ನೀರಿನ ಪೂರೈಕೆ ಮಾಡುವ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಕುಮಾರ ನಾಯ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.