ಯಲ್ಲಾಪುರದ ಕರಡೊಳ್ಳಿಯ ಗೋವರ್ಧನ ಗೋಶಾಲೆಯ ಸ್ವರ್ಣನಂದಿನಿ ಗೋಸಂಸ್ಥಾನ ಕಟ್ಟಡ ನಿರ್ಮಾಣದ ಸಹಾಯಾರ್ಥ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಹೊನ್ನಾವರದ ಮಣ್ಣಿಗೆಯ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್‌ನ ಕಲಾವಿದರಿಂದ ಪ್ರದರ್ಶನಗೊಂಡ ವರದಯೋಗಿ ಶ್ರೀಧರ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಯಲ್ಲಾಪುರ: ಕರಡೊಳ್ಳಿಯ ಗೋವರ್ಧನ ಗೋಶಾಲೆಯ ಸ್ವರ್ಣನಂದಿನಿ ಗೋಸಂಸ್ಥಾನ ಕಟ್ಟಡ ನಿರ್ಮಾಣದ ಸಹಾಯಾರ್ಥ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಹೊನ್ನಾವರದ ಮಣ್ಣಿಗೆಯ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್‌ನ ಕಲಾವಿದರಿಂದ ಪ್ರದರ್ಶನಗೊಂಡ ವರದಯೋಗಿ ಶ್ರೀಧರ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಜಿ.ಡಿ. ಭಟ್ಟ ಕೆಕ್ಕಾರ ನಿರ್ದೇಶನ, ಸಂತೋಷ ಯಾಜಿ ಮಣ್ಣಿಗೆ ಅವರ ಸಂಯೋಜನೆಯಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಸದ್ಗುರು ಶ್ರೀಧರ ಸ್ವಾಮಿಗಳ ಮಹಿಮೆಯನ್ನು ಕಲಾವಿದರು ಸುಂದರವಾಗಿ ಅಭಿನಯಿಸಿದರು.
ಶ್ರೀಧರ ಸ್ವಾಮಿಗಳ ಅವತಾರದ ಹಿನ್ನೆಲೆಯಿಂದ ಆರಂಭವಾಗಿ, ಅವರ ಬೆಳವಣಿಗೆ, ಆಧ್ಯಾತ್ಮದತ್ತ ಒಲವು, ಸನ್ಯಾಸ ಸ್ವೀಕಾರ, ದೇಶದ ವಿವಿಧೆಡೆ ಸಂಚಾರ, ಭಕ್ತರನ್ನು ಉದ್ಧರಿಸಿದ ಘಟನೆಗಳು, ವರದಳ್ಳಿಯಲ್ಲಿ ದೇವಾಲಯ ಸ್ಥಾಪಿಸಿ, ಅಲ್ಲೇ ನೆಲೆಸಿ, ಭಕ್ತರಿಗೆ ಸಂದೇಶ ನೀಡಿ ದೇಹತ್ಯಾಗ ಮಾಡಿದ ಕಥಾನಕವನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಜಿ. ವಿಷ್ಣು ಮಣ್ಣಿಗೆ ಅವರು ರಂಗರೂಪಕ್ಕೆ ಇಳಿಸಿದ ಈ ನಾಟಕದ 18ನೇ ಪ್ರದರ್ಶನ ಇದಾಗಿದ್ದು, ಶ್ರೀಧರರ ಜೀವನ ಚರಿತ್ರೆಯನ್ನು ನೋಡುಗರ ಮನಸ್ಸಿನಾಳದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡುವಲ್ಲಿ ಈ ಕಲಾ ತಂಡ ಯಶಸ್ವಿಯಾಯಿತು.