ಕಾರವಾರ: ಪ್ರಸ್ತುತ ಸಂಚರಿಸುತ್ತಿರುವ ಮಡಗಾಂವ್ ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರಿಗೆ (ಯಶವಂತಪುರ) ವಿಸ್ತರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕುರಿತು ಅಽಕೃತವಾಗಿ ಮಾಹಿತಿ ನೀಡಿದ್ದಾರೆ. ಇದು ಉತ್ತರ ಕನ್ನಡ ಮತ್ತು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ನಾನು ಕಳೆದ ಮಾರ್ಚ್ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಈ ಕುರಿತು ಮನವಿ ಮಾಡಿದ್ದೆವು. ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದಿದ್ದಾರೆ.
ಇನ್ನು ಮುಂದೆ ಈ ರೈಲು ಪರಿಷ್ಕೃತ ಸಮಯದೊಂದಿಗೆ ರೈಲು ಸಂಖ್ಯೆ 26655/26656 ಯಶವಂತಪುರ - ಮಂಗಳೂರು -ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿ ಸಂಚರಿಸಲಿದೆ. ಈ ನಿರ್ಧಾರದಿಂದ ಕರಾವಳಿ ಜಿಲ್ಲೆಗಳು, ಉತ್ತರ ಕನ್ನಡ ಭಾಗದ ಜನರಿಗೆ, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಅಪಾರ ಅನುಕೂಲವಾಗಲಿದೆ ಎಂದಿದ್ದಾರೆ.
ರೈಲ್ವೆ ಸೇವಾ ಸಮಿತಿ ಹರ್ಷ
ಮಡಗಾಂವ-ಮಂಗಳೂರು ವಂದೇ ಭಾರತ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರಿಗೆ ವಿಸ್ತರಿಸಿರುವುದಕ್ಕೆ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಸಂತಸ ವ್ಯಕ್ತಪಡಿಸಿದೆ. ಸಂಸದ ಕಾಗೇರಿ ಸಾಕಷ್ಟು ಪ್ರಯತ್ನ ಮಾಡಿದ್ದರು. ರೈಲಿಗೆ ಜಿಲ್ಲೆಯ ಕಾರವಾರ, ಗೋಕರ್ಣ, ಮುರುಡೇಶ್ವರ ನಿಲ್ದಾಣಗಳಲ್ಲಿ ನಿಲುಗಡೆ ಇಗುವುದು ಇನ್ನಷ್ಟು ಅನುಕೂಲವಾಗಲಿದೆ. ವಂದೇಭಾರತ ರೈಲು ಬೆಳಿಗ್ಗೆ ಮಡಗಾಂವನಿAದ ಹೊರಟು ಅದೇದಿನ ಸಂಜೆ ಬೆಂಗಳೂರು ತಲುಪಲಿದೆ. ಅದೇ ಸಮಯದಲ್ಲಿ ಬೆಂಗಳೂರಿನಿಂದ ಮಡಗಾಂವಗೆ ವಂದೇ ಭಾರತ ರೈಲು ಹೊರಟು ಸಂಜೆ ಜಿಲ್ಲೆಗೆ ಆಗಮಿಸಲಿದೆ ಎಂದು ಸಮಿತಿಯ ಕಾರ್ಯದರ್ಶಿ ರಾಜೀವ ಗಾಂವಕರ್ ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಮಾತ್ರವೇ ವಂದೇ ಭಾರತ್ ಸಂಚಾರ ಎಂದಾಗ, ಕರಾವಳಿ ಎಂದರೆ ಮಂಗಳೂರು ಮಾತ್ರವಲ್ಲ, ಬದಲಾಗಿ ಉಡುಪಿ, ಕಾರವಾರವೂ ಹೌದು. ವಂದೇ ಭಾರತ್ ಇಲ್ಲಿಗೆ ಬರಲೇ ಬೇಕು ಎಂದು ಹೋರಾಟ ಸಮಿತಿ ಹೋರಾಟ ನಡೆಸಿತ್ತು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಿದ್ದಿಗೆ ಬಿದ್ದು ಓಡಾಟ ನಡೆಸಿದ್ದರು. ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಪ್ರಯತ್ನವನ್ನೂ ಮರೆಯುವಂತಿಲ್ಲ ಎಂದಿದ್ದಾರೆ.