ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಲೋಕ ಅದಾಲತ್‌ ನಡೆಸಿದರು. Loka adalat
ಉತ್ತರ ಕನ್ನಡ

1.47 ಲಕ್ಷ ಪ್ರಕರಣಗಳು ಇತ್ಯರ್ಥ

ಕಾರವಾರ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1.41 ಲಕ್ಷ ಪ್ರಕರಣಗಳನ್ನು ಒಂದೇ ದಿನದಲ್ಲಿ ಬಗೆಹರಿಸಲಾಗಿದೆ. 50.88 ಕೋಟಿ ರೂ. ಸಂಗ್ರಹ ಹಾಗೂ ಪಾವತಿ ಮಾಡಲಾಗಿದೆ.

ನ್ಯಾಯಾಲಯಗಳಲ್ಲಿ ಬಾಕಿ ಇರುವ 6,041 ಪ್ರಕರಣಗಳು ಹಾಗೂ 1,41,697 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ.

ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಒಟ್ಟು 37 ಕುಟುಂಬದ ಆಸ್ತಿ ವಿಭಜನೆಯ ಪ್ರಕರಣಗಳು ಹಾಗೂ 432 ಚೆಕ್ ಬೋನ್ಸ್ ಪ್ರಕರಣಗಳು ಮತ್ತು 35 ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ರಾಜಿಯಾಗಿ ಇತ್ಯರ್ಥಗೊಂಡಿರುವುದು ವಿಶೇಷವಾಗಿದೆ.

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 46,129 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು ಅವುಗಳಲ್ಲಿ ಪ್ರಸ್ತುತ ಹಂತದಲ್ಲಿ ರಾಜೀಯಾಗಬಹುದಾದ 15,245 ಪ್ರಕರಣಗಳಿದ್ದು, ಅವುಗಳ ಪೈಕಿ 10,842 ರಾಜೀ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಅವುಗಳಲ್ಲಿ 6,041 ಪ್ರಕರಣಗಳು ರಾಜಿಯಾಗಿವೆ. ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕಾದ 1,41,697 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಬಗೆಹರಿಸಲಾಗಿದೆ.

ಒಂದಾದ ಜೋಡಿ

ನ್ಯಾಯಾಲಯದ ಮೆಟ್ಟಿಲೇರಿದ ಕಾರವಾರ, ಕುಮಟಾ, ಸಿದ್ದಾಪುರ ಮತ್ತು ಮುಂಡಗೋಡದ ಒಟ್ಟು 4 ಕೌಟುಂಬಿಕ ಪ್ರಕರಣಗಳಲ್ಲಿ ರಾಜಿಯಾಗಿ ದಂಪತಿ ಒಟ್ಟಿಗೆ ಜೀವನ ನಡೆಸಲು ಒಪ್ಪಿಕೊಂಡು ಕೂಡಿ ಹೋದರು. ಜೀವನಾಂಶಕ್ಕಾಗಿ ಸಲ್ಲಿಸಿದ್ದ ಸುಮಾರು 29 ಪ್ರಕರಣಗಳು ರಾಜಿಯಾದವು.