ಕಾರವಾರದಲ್ಲಿ ಫೆಡರೇಶನ್ ಸದಸ್ಯರು ವಿಜಯೋತ್ಸವ ಆಚರಿಸಿದರು.
ಕಾರವಾರ: ಮಾರ್ಚ್ 29 ರಂದು ಮುಕ್ತಾಯವಾಗಿದ್ದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ದಿವಂಗತ ರಾಜು ತಾಂಡೇಲ ಅಭಿಮಾನ ಬಳಗ 14 ರಲ್ಲಿ 10 ಸ್ಥಾನ ಸ್ಥಾನ ಪಡೆದು, ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಫೆಡರೇಶನ್ ಮಾಜಿ ಅಧ್ಯಕ್ಷ, ಗಣಪತಿ ಮಾಂಗ್ರೆ ಹಾಗೂ ಅವರ ಬಣದ ಇನ್ನಿಬ್ಬರು ಮಾತ್ರ ಜಯಗಳಿಸಿದ್ದಾರೆ. ಆದರೆ, ಅಧ್ಯಕ್ಷರ ಆಯ್ಕೆ ಸೇರಿ ಮುಂದಿನ ಪ್ರಕ್ರಿಯೆಗಳು ಹೈಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟಿವೆ.
ಫೆಡರೇಶನ್‌ನ 15 ನಿರ್ದೇಶಕ ಸ್ಥಾನಗಳಿಗಾಗಿ ಚುನಾವಣೆ ಘೋಷಿಸಲಾಗಿತ್ತು. ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಉಳಿದ 14 ಸ್ಥಾನಗಳಲ್ಲಿ 4 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. 10 ಸ್ಥಾನಗಳಿಗಾಗಿ ಮತದಾನ ನಡೆದಿತ್ತು.
ಹೈಕೋರ್ಟ್ ತೀರ್ಪು:
ಸಹಕಾರ ಸಂಘದ ನಿಮಮಾವಳಿಯಂತೆ ಫೆಡರೇಶನ್‌ನ 311 ಕ್ಕೂ ಹೆಚ್ಚು ಬ ವರ್ಗದ ಮತದಾರರನ್ನು ಚುನಾವಣಾಽಕಾರಿ ಅವರು ಅನರ್ಹ ಎಂದು ಘೋಷಿಸಿದ್ದರು. 159 ಬ ವರ್ಗದ ಸದಸ್ಯರಿಗೆ ಮಾತ್ರ ಮತದಾನದ ಅವಕಾಶ ನೀಡಿದ್ದರು. ಅದನ್ನು ಪ್ರಶ್ನಿಸಿ ಧಾರವಾರ ಹೈಕೋರ್ಟ್ನಲ್ಲಿ 6 ಪ್ರತ್ಯೇಕ ದಾವೆಗಳು ದಾಖಲಾಗಿದ್ದವು. ಅನರ್ಹರಾಗಿದ್ದ 311 ಜನರಿಗೆ ಮತದಾನ ಮಾಡಲು ಅವಕಾಶ ನೀಡಿ ಎಂದು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್, ಅವರ ಮತಗಳನ್ನು ಪ್ರತ್ಯೇಕವಾಗಿ ಇರಿಸುವಂತೆ ಸೂಚಿಸಿತ್ತು. ಅದರಂತೆ ಮಾ.29 ರಂದು ಮತದಾನ ನಡೆದಿತ್ತು. ಸೋಮವಾರ ಹೈಕೋರ್ಟ್ ಅಂತಿಮ ತೀರ್ಪು ನೀಡಿದ್ದು, 6 ರಲ್ಲಿ 5 ದಾವೆಗಳನ್ನು ತಿರಸ್ಕಾರ ಮಾಡಿದೆ. ಇದರಿಂದ ಅರ್ಹ 159 ಮತಗಳಲ್ಲಿ ಚಲಾವಣೆಯಾದ 152 ಮತಗಳ ಎಣಿಕೆಯನ್ನು ನಡೆಸಿ, ಫಲಿತಾಂಶವನ್ನು ಮಂಗಳವಾರ ಚುನಾವಣಾಧಿಕಾರಿ ಶ್ರೀದೇವಿ ಕಟ್ಟಿಮನಿ ಘೋಷಿಸಿದರು.
ಆದರೆ, ಅನರ್ಹರಾದ ಕ ವರ್ಗದ 7 ಮತದಾರರ ವಿಚಾರವಾಗಿ ಸಲ್ಲಿಕೆಯಾದ ದಾವೆಯೊಂದು ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದರಿಂದ ಈ ಫಲಿತಾಂಶವು ಹೈಕೋರ್ಟ್ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಚುನಾವಣಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದವರು
ಬ ವರ್ಗದ ವಿಭಾಗದಲ್ಲಿ ಕಾರವಾರ ಬೈತಖೋಲ್‌ನ ಪ್ರಶಾಂತ ತುಕಾರಾಮ ತಾಂಡೇಲ, ಗಣಪತಿ ರಾಮಾ ಮಾಂಗ್ರೆ, ಅಂಕೋಲಾದ ಪ್ರಮೋದ ರಮೇಶ ಬಾನಾವಳಿ, ತದಡಿಯ ಮಹೇಶ ಎನ್. ಮೂಡಂಗಿ, ಹೊನ್ನಾವರದ ಗೋವಿಂದ ಹನುಮಂತ ತಾಂಡೇಲ, ಭಟ್ಕಳ ಅಳ್ವೇಕೋಡಿಯ ವಿಠ್ಠಲ ಶನಿಯಾರ ದೈಮನೆ, ಕ ವರ್ಗದಲ್ಲಿ ಬಿಣಗಾದ ವೆಂಕಟೇಶ ತಾಂಡೇಲ, ಸಂಪತಿ ಹರಿಕಂತ್ರ, ಕುಮಟಾದ ಬೀರಪ್ಪ ಈರಾ ಹರಿಕಂತ್ರ, ಕೋಡಿಬಾಗದ ಪ್ರಶಾಂತ ಗಣಪತಿ ಹರಿಕಂತ್ರ, ಕೋಣೆವಾಡದ ವರ್ಷಾ ರಾಮದಾಸ ಬೇಳೂರಕರ್, ಸಂಕ್ರಿವಾಡದ ಸವಿತಾ ನಿತಿನ್ ಗಾಂವಕರ್, ಭಟ್ಕಳದ ದಿವಾಕರ ದಾಸಿ ಮೊಗೇರ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿಜೇತ ರಾಜು ತಾಂಡೇಲ ಬಣದ ಪ್ರಮುಖರು ಕಾರವಾರ ನೇತಾಜಿ ಸುಭಾಷ್ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.