ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸಭೆ ನಡೆಸಿದರು.
- ಸುಪ್ರೀ ಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಜಾರಿ ಮಾಡಲು ಸೂಚನೆ
ಕಾರವಾರ: ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆ ಸೇರಿದಂತೆ ಯಾವುದೇ ಸಂದರ್ಭಗಳಲ್ಲಿ ಡಿಜೆ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧವಿದೆ. ಅದನ್ನು ಉಲ್ಲಂಘಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಗಣೇಶ ಚತುರ್ಥಿ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ಧ್ವನಿವರ್ಧಕಗಳ ಬಳಕೆಗೆ ಸಂಪೂರ್ಣ ನಿಷೇಧವಿದ್ದು, ಬೆಳಗಿನ ಅವಯಲ್ಲಿ ಶಬ್ಧಮಾಲಿನ್ಯವಾಗದಂತೆ ಧ್ವನಿವರ್ಧಕಗಳನ್ನು ಬಳಸಬಹುದಾಗಿದೆ ಎಂದರು.
ಪರಿಸರ ಮಾಲಿನ್ಯ ತಡೆಯಲು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದ ಗಣೇಶ ಮೂರ್ತಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮಣ್ಣಿನಿಂದ ಮಾಡಿದ ಮತ್ತು ರಾಸಾಯನಿಕ ರಹಿತ ಬಣ್ಣ ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಬಳಸಬೇಕು ಎಂದರು. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜಲಮೂಲಗಳು ಕಲುಷಿತವಾಗುವುದನ್ನು ತಪ್ಪಿಸಲು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ತಾತ್ಕಾಲಿಕವಾಗಿ ನಿರ್ಮಿಸಲಾದ ಕೃತಕ ಹೊಂಡಗಳಲ್ಲಿ ಮಾತ್ರ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಪೂರ್ವಾನುಮತಿಯನ್ನು ಪಡೆಯಬೇಕು. ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು ಮತ್ತು ಸ್ವಯಂ ಸೇವಕರನ್ನು ನಿಯೋಜಿಸಬೇಕು. ಸಾರ್ವಜನಿಕ ಪ್ರಸಾದ ವಿತರಣೆ ಮತ್ತು ಕುಡಿಯುವ ನೀರು ವಿತರಣೆಯಲ್ಲಿ ಶುಚಿತ್ವ ಕಾಪಾಡುವಂತೆ ಆಯೋಜಕರಿಗೆ ಸೂಚಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತಂತೆ ಸಿಂಗಲ್ ವಿಂಡೋ ಮೂಲಕ ಎಲ್ಲಾ ಅಗತ್ಯ ಅನುಮತಿಗಳನ್ನು ಸರಳವಾಗಿ ನೀಡುವಂತೆ ಅಽಕಾರಿಗಳಿಗೆ ಸೂಚನೆ ನೀಡಿದರು.ಗಣೇಶ ಪೆಂಡಾಲ್‌ಗಳ ಬಳಿ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹೆಸ್ಕಾಂ ಮತ್ತು ಆಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಹಬ್ಬದ ಸಂದರ್ಭದಲ್ಲಿ ಈಗಾಗಲೇ ಅನುಮತಿ ಪಡೆದಿರುವವರು ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದರು.
ಎಸ್‌ಪಿ ದೀಪನ್ ಎಂ.ಎನ್. ಭಟ್ಕಳ ಎಎಸ್‌ಪಿ ರಾಣು ಗುಪ್ತಾ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಪರಿಸರ ಅಽಕಾರಿ ಡಾ.ಗಣಪತಿ ಹೆಗಡೆ ಸಭೆಯಲ್ಲಿದ್ದರು.