ಉರ್ದು ಶಾಲೆಯ ತಡೆಗೋಡೆ ಕಾಮಗಾರಿ ಆರಂಭಿಸಿರುವುದು. 
ಉತ್ತರ ಕನ್ನಡ

Property ಪಪಂ ಆಸ್ತಿ ಮೇಲೆ ಉರ್ದು ಶಾಲೆ ಕಣ್ಣು!

ಸಿದ್ದಾಪುರ: ಪರಾಧೀನವಾಗುತ್ತಿರುವ ಪಟ್ಟಣ ಪಂಚಾಯಿತಿ ಆಸ್ತಿಯನ್ನು (Property) ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಪಪಂನ ಎಲ್ಲ  ಆಸ್ತಿಗಳನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗಬೇಕೆ ಹೊರತು ಅದನ್ನು ಅತಿಕ್ರಮಿಸುವುದಲ್ಲ. ಇಲ್ಲಿಯ ಉರ್ದು ಶಾಲೆಯ ತಡೆಗೋಡೆ ನಿರ್ಮಿಸುವುದಕ್ಕೆ ಪಪಂ ಜಾಗದಲ್ಲಿಯೇ ಮುಂದಾಗಿದ್ದು ಅದನ್ನು ತಕ್ಷಣ ಬಂದಮಾಡಬೇಕು ಎಂದು ಪಪಂನ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಆಗ್ರಹಿಸಿದರು.
ಪಟ್ಟಣದ ಬಾಲಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಪ.ಪಂ ವ್ಯಾಪ್ತಿಯ ಸರ್ವೆ ನಂ 100 ಬ ದಲ್ಲಿ  1ಎಕರೆ ಜಾಗ ಮೊದಲು ಎತ್ತಿನ ಪೇಟೆಯಾಗಿತ್ತು. ನಂತರ ಶಿಕ್ಷಣ ಇಲಾಖೆ ಈ ಜಾಗದಲ್ಲಿ ಬಾಲಕ ಮತ್ತು ಬಾಲಕಿಯರ ಶಾಲೆ ಮತ್ತು ಉರ್ದು ಶಾಲೆಯನ್ನು ನಿರ್ಮಿಸಿತು. ಪಟ್ಟಣದಲ್ಲಿ ಸಂತೆ ಮಾಡಲು ನಿರ್ದಿಷ್ಟ ಸ್ಥಳವಿಲ್ಲದ ಕಾರಣ ಹಲವು ವರ್ಷಗಳ ಬಳಿಕ ಬಾಲಕ ಮತ್ತು ಬಾಲಕಿಯರ ಶಾಲೆಯನ್ನು ಸ್ಥಳಾಂತರಗೊಳಿಸಿ ಜಾಗವನ್ನು ಪಪಂ ಸುಪರ್ದಿಗೆ ಪಡೆಯಲಾಯಿತು. ಆದರೆ, ಉರ್ದು ಶಾಲೆಗೆ ಸ್ಥಳ ನಿಗದಿಯಾಗದ ಕಾರಣ ಇಂದಿಗೂ ಶಾಲೆ ಪಟ್ಟಣ ಪಂಚಾಯಿತಿ ಜಾಗದಲ್ಲೇ ಇದೆ. ಕಳೆದ ವರ್ಷ ಸುರಿದ ಮಳೆಯಿಂದ ಶಾಲೆಯ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈಗ 22ಲಕ್ಷ ರೂಗಳ ಅನುದಾನದಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿರುವುದಲ್ಲದೇ  ಹಿಂದಿದ್ದ ಕಂಪೌಂಡಗಳಿಗಿಂತ  ಸುಮಾರು 5ಅಡಿಗಳ?್ಟು ಹೊರಗೆ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ  ಪಪಂನ ಮತ್ತಷ್ಟು ಜಾಗ ಪರಾಧಿನವಾಗುತ್ತದೆ. ಈ ಕುರಿತು ಶಾಸಕರಲ್ಲಿ ಮನವಿ ಮಾಡಿದ್ದು ಸಿದ್ದಾಪುರಕ್ಕೆ ಭೇಟಿ ನೀಡಿದಾಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಭೇಟಿ ನೀಡಿದಾಗ ಈ ಕುರಿತು ಚರ್ಚೆ ನಡೆಸದೇ ಮೌನ ವಹಿಸಿದ್ದಾರೆ. ಇದಕ್ಕೆ ಅಧಿಕಾರಿಗಳ ಬೆಂಬಲವೂ ಇರುವುದರಿಂದ ಪಪಂನ  ಜಾಗ ಪರಾಧೀನವಾಗುತ್ತಿದೆ. ಹೀಗೆ ಮುಂದುವರೆದರೆ ಪಟ್ಟಣ ಪಂಚಾಯತಕ್ಕೆ  ಜಾಗವೇ ಇಲ್ಲದಂತಾಗುತ್ತದೆ. ಇದು ಬಲವಂತವಾಗಿ ಪಪಂನ ಜಾಗ ಕಬಳಿಸುವ ಒಂದು ಹುನ್ನಾರವಾಗಿದೆ. ಶಾಸಕರು ತಕ್ಷಣ ಅತಿಕ್ರಮಣ ತಡೆದು ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮೇ. 20ರಂದು ಬೆಳಗ್ಗೆ 10.30ಕ್ಕೆ ತಹಸೀಲ್ದಾರ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು. 
ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ವಿನಯ ಹೊನ್ನೆಗುಂಡಿ, ಗುರುರಾಜ ಶಾನಭಾಗ ರವಿಕುಮಾರ ನಾಯ್ಕ, ಸುಮನಾ ಕಾಮತ, ದಿವಾಕರ ನಾಯ್ಕ ಹೆಮ್ಮನಬೈಲ್, ಮಾರುತಿ ನಾಯ್ಕ ಕಾನಗೋಡ, ವೆಂಕಟೇಶ ಬಿ, ನಂದನ ಬೋರಕರ್, ಎಸ್.ಕೆ.ಮೇಸ್ತಾ, ಕೃಷ್ಣಮೂರ್ತಿ ಕಡಕೇರಿ, ವಿಜೇಂದ್ರ ಗೌಡರ್, ಅನಂತ ಹೆಗಡೆ ಹೊಸಗದ್ದೆ, ಸತೀಶ ಹೆಗಡೆ ಬೈಲಳ್ಳಿ ಇತರರಿದ್ದರು.