ಮಂಗಳವಾರದ ಗಾಳಿ-ಮಳೆಗೆ WIND ಶಿರಸಿ ತಾಲೂಕಿನ ಅನೇಕ ಕಡೆಗಳಲ್ಲಿ ಮನೆಗಳ ಮೇಲೆ ಮರ ಬಿದ್ದಿದೆ.
ಶಿರಸಿ: ತಾಲೂಕಿನಾದ್ಯಂತ ಮಂಗಳವಾರ ಸಂಪೂರ್ಣ ದಿನ ಅಬ್ಬರದ ಗಾಳಿ-ಮಳೆಯಾಗಿದ್ದು, WIND ಅನಾಹುತಗಳು ಸಂಭವಿಸಿವೆ.
ನಗರದ ಭೀಮನ ಗುಡ್ಡದಲ್ಲಿ ವಿಜಯ ಚಿಕ್ಲಯ್ಯ ಪೂಜಾರಿ ಅವರ ವಾಸ್ತವ್ಯದ ಮನೆ ಹಿಂಬದಿಯ ಗೋಡೆ ಬಿದ್ದು ಹಾನಿ ಸಂಭವಿಸಿದ್ದರೆ, ದಾಸನಕೊಪ್ಪದ ಮರಿಯಪ್ಪ ಗೋಂದಳಿ ಅವರ ಮನೆ ಅಡುಗೆ ಕೋಣೆಯ ಗೋಡೆ ಕುಸಿದಿದೆ.
ಜಾನ್ಮನೆ ಗ್ರಾಪಂ ಬಲವಳ್ಳಿ ರೇವಣಕಟ್ಟಾದಲ್ಲಿ ಅಬ್ದುಲ್ ಗಣಿ ಅಹಮ್ಮದ್ ಸಾಬ್ ಅವರ ಮನೆ ಹಿಂದಿನ ಪಿಚಿಂಗ್ ಕುಸಿದು ಹಾನಿಯಾಗಿದೆ. ತಿಗಣಿಯ ಪ್ರಭು ಹುಚ್ಚಪ್ಪ ಕಬ್ಬೇರ ಅವರ ಮನೆ ಹಿಂಭಾಗದ ಅಡುಗೆ ಕೋಣೆ ಕುಸಿದಿದೆ.
ನೆಗ್ಗು ಗ್ರಾಪಂ ವ್ಯಾಪ್ತಿಯ ಮುಳಖಂಡದ ವಿಶ್ವನಾಥ ಯಂಕ ನಾಯ್ಕ ಅವರ ಮನೆ ಮೇಲೆ ಬೃಹತ್ ಮರ ಮುರಿದು ಹಾನಿಯಾಗಿದೆ. ದುರ್ಗಿ ಸುಬ್ರಾಯ ಮುಕ್ರಿ ಅವರ ಮನೆ ಮೇಲೆ ಮಾವಿನ ಮರ ಬಿದ್ದು ಹಾನಿಯಾಗಿದೆ.
ಕುಪಗಡ್ಡೆಯಲ್ಲಿ ಸೋಮನಗೌಡ ಈರಪ್ಪ ಗೌಡ ಅವರ ಮನೆ ಗೋಡೆ ಕುಸಿತವಾಗಿದ್ದು, ಕಡವೆಯಲ್ಲಿ ಅಂಗನವಾಡಿ ಮೇಲೆ ಮರ ಬಿದ್ದಿದೆ. ನಿಡಗೋಡಿನ ವೆಂಕಟ್ರಮಣ ಸೀತಾರಾಮ ಭಟ್ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದರೆ, ನಗರದ ಗಾಂಧಿನಗರದಲ್ಲಿ ರಾಮಚಂದ್ರ ನಾಯ್ಕ ಅವರ ಮನೆ ಪಕ್ಕದ ಕಾಂಪೌಂಡ್ ಗೋಡೆ ಕುಸಿದು ಮನೆಯ ಗೋಡೆಯ ಮೇಲೆ ಬಿದ್ದಿದೆ. ಪಾರ್ವತಿ ನಾಯ್ಕ ಅವರ ಮನೆಯ ಛಾವಣಿ ಕುಸಿದಿದೆ.
ಹಿರೆಕಳವೆಯಲ್ಲಿ ಬಂಗಾರಿ ಸುಬ್ಬಾ ಗೌಡ ಅವರ ಅಡಕೆ ತೋಟದಲ್ಲಿ ಬೃಹತ್ ಮರ ಬಿದ್ದಿದ್ದರಿಂದ 25ಕ್ಕೂ ಅಧಿಕ ಅಡಿಕೆ ಮರಗಳು ಮುರಿದಿವೆ. ಶಿರಸಿ ಹೆಗಡೆಕಟ್ಟಾ ರಸ್ತೆ ಮಳಲಿ ಕ್ರಾಸ್ ಬಳಿ ಮರ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಮುರಿದಿದ್ದರೆ, ಶಿವಳ್ಳಿ ಗ್ರಾಮದ ಹೆಗಡೆಕಟ್ಟಾ ಮಸೀದಿಯ ಪಕ್ಕದ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿದೆ. ದೊಡ್ನಳ್ಳಿ ಪಂಚಾಯಿತಿ ಆರೇಕೊಪ್ಪದಲ್ಲಿ ಮರ ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದೆ.
ಸಂಪರ್ಕ ಸಮಸ್ಯೆ: ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಕಡೆ ತಂತಿಯ ಮೇಲೆ ಮರ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಗರದಿಂದ 30 ಕಿಮೀ ಆಚೆಗಿನ ಹಳ್ಳಿಗಳು ಕಳೆದ ಮೂರು ನಾಲ್ಕು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಸ್ಥಿತಿ ಅನುಭವಿಸಿವೆ. ದೇವನಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆಯಿಂದಲೂ ವಿದ್ಯುತ್ ಇಲ್ಲದೇ ಸಾರ್ವಜನಿಕರು ಮೇಣದಬತ್ತಿ ಹಚ್ಚಿಕೊಂಡು ರಾತ್ರಿ ಕಳೆಯುವಂತಾಗಿದೆ.
ವಿದ್ಯುತ್ ಅವ್ಯವಸ್ಥೆ ಸರಿಪಡಿಸಲು ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಒಂದೆಡೆ ವಿದ್ಯುತ್ ಕಂಬಗಳು ಮುರಿದಿದ್ದನ್ನು ರಿಪೇರಿ ಮಾಡುತ್ತಿದ್ದಂತೆಯೇ ಸಮೀಪದಲ್ಲಿಯೇ ಇನ್ನೊಂದು ಮರ ಬಿದ್ದು ಮತ್ತೆ ಅದೇ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ.