ಕಾರವಾರದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು
- ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠಕ್ಕ ಉತ್ತರ ಕನ್ನಡ ಸೇರಿಸಲು ವಿರೋಧ
- ಕಾರವಾರದಲ್ಲಿ ಬೃಹತ್ ಪ್ರತಿಭಟನೆ ವಿವಿಧ ಪಕ್ಷಗಳ ಮುಖಂಡರು ಭಾಗಿ
ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠಕ್ಕೆ ಸೇರಿಸುವುದನ್ನು ವಿರೋಧಿಸಿ ಜಿಲ್ಲಾ ವಕೀಲರ ಸಂಘ ಗುರುವಾರ ಆಯೋಜಿಸಿದ್ದ ಪ್ರತಿಭಟನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಧಾರವಾಡ, ಹಾವೇರಿ, ಗದಗ ಜಿಲ್ಲೆಯ ವಕೀಲರು, ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು ಆಗಮಿಸಿ ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಮೀನುಗಾರರ ಸಂಘಟನೆ, ಕನ್ನಡ ಪರ ಸಂಘಟನೆಗಳು, ಪಹರೆ ವೇದಿಕೆ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಸೇರಿ ಪ್ರಮುಖ ಸಂಘಟನೆಗಳು ಮೆರವಣಿಗೆಯಲ್ಲಿ ಸಾಗಿದವು.
ನಗರ ಮಿತ್ರ ಸಮಾಜದ ಮೈದಾನದಿಂದ ಹೊರಟ ಮೆರವಣಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸುರಿಯುವ ಮಳೆಯಲ್ಲೂ ಸಾಗಿ ಬಂದ ವಕೀಲರು ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಯಿತು.
ಖ್ಯಾತ ವಕೀಲ ಧಾರವಾಡದ ಬಿ.ಡಿ.ಹಿರೇಮಠ ಮಾತನಾಡಿ, ಮಂಗಳೂರಿನಲ್ಲಿ ಮತ್ತೊಂದು ಹೈಕೋರ್ಟ್ ಪೀಠ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಅದಕ್ಕೆ ನಾವು ಬೆಂಬಲ ನೀಡುತ್ತೇವೆ. ಆದರೆ, ಧಾರವಾಡ ಹೈಕೋರ್ಟ್ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳನ್ನು ಅದಕ್ಕೆ ಸೇರಿಸುವುದಕ್ಕೆ ಬಿಡುವುದಿಲ್ಲ. ಈ ವಿಚಾರ ಇನ್ನೂ ನಿರ್ಣಯವಾಗಿಲ್ಲ ಪ್ರಸ್ತಾವನೆ ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೆ, ನಾವು ಹೋರಾಟ ಮುಂದುವರಿಸೋಣ. ಸೂರ್ಯಚಂದ್ರರಿರುವವರೆಗೂ ಉತ್ತರ ಕನ್ನಡ ಧಾರವಾಡ ಹೈಕೋರ್ಟ್ ಪೀಠದ ಜೊತೆಗೇ ಸೇರಿರಲಿ ಎಂದರು.
ಕಾರವಾರದ ಹಿರಿಯ ವಕೀಲ ಎಸ್.ಪಿ.ಕಾಮತ್ ಮಾತನಾಡಿ, 1957 ರವರೆಗೂ ಉತ್ತರ ಕನ್ನಡ, ಧಾರವಾಡ, ವಿಜಯಪುರ ಜಿಲ್ಲೆಗಳು ಬಾಂಬೆ ಪ್ರೆಸಿಡೆನ್ಸಿಗೆ ಸೇರಿತ್ತು. ಇಲ್ಲಿ ಹಲವು ವಿಶಿಷ್ಟ ಕಾಯ್ದೆಗಳು ಮದ್ರಾಸ್ ಪ್ರೆಸಿಡೆನ್ಸಿಗಿಂತ ಭಿನ್ನವಾಗಿದ್ದವು. ಈಗಲೂ ಅವುಗಳಲ್ಲಿ ಕೆಲವು ಕಾಯ್ದೆಗಳು ಜಾರಿಯಲ್ಲಿವೆ. ಈ ಸಂಬಂಧ ಕೇವಲ ಕಾಯ್ದೆಗೆ ಸೀಮಿತವಾಗಿಲ್ಲ. ಇದೊಂದು ಸಂಸ್ಕೃತಿಯಾಗಿದೆ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಹೈಕೋರ್ಟ್ ಪೀಠಕ್ಕೆ ಸೇರಿಸುವುದು ಅವೈಜ್ಞಾನಿಕವಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಶಾಸಕ ಸತೀಶ ಸೈಲ್, ಮಾಜಿ ಸಚಿವ ಆನಂದ ಅಸ್ನೋಟಿಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ವಕೀಲರ ಸಂಘದ ಪದಾಧಿಕಾರಿಗಳೂ ಆಗಮಿಸಿದ್ದರು.
ಮನವಿಯಲ್ಲೇನಿದೆ:
ಕರಾವಳಿ ಎಂದರೆ ಕೇವಲ ಮಂಗಳೂರಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಉಳಿದೆರಡು ಜಿಲ್ಲೆಗಳಿಗಿಂತ ಹೆಚ್ಚು ಉದ್ದ ಎಂದರೆ 164 ಕಿಮೀ ಕಡಲ ತೀರವನ್ನು ಹೊಂದಿದೆ. ಜಿಲ್ಲೆಯ ವಿಸ್ತಾರವೂ ಉಳಿದೆರಡು ಜಿಲ್ಲೆಗಳಿಗಿಂತ ಹೆಚ್ಚಿದೆ. ಬ್ರಿಟಿಷರ ಕಾಲದಲ್ಲಿ ಉತ್ತರ ಕನ್ನಡದ ಹೊನ್ನಾವರವೇ ಕರಾವಳಿಯ ಕೇಂದ್ರವಾಗಿತ್ತು. ಹಾಗಿರುವಾಗ ಎಲ್ಲವನ್ನೂ ಮಂಗಳೂರಿಗೆ ಸೇರಿಸುವುದು ಸರಿಯಲ್ಲ. ಇನ್ನೂ ದೂರದ ದೃಷ್ಟಿಯಿಂದಲೂ ಉತ್ತರ ಕನ್ನಡ ಜಿಲ್ಲೆಯ 12 ರಲ್ಲಿ 11 ತಾಲೂಕಿನ ಜನರಿಗೆ ಧಾರವಾಡವೇ ಮಂಗಳೂರಿಗಿಂತ ಹತ್ತಿರವಾಗಿದೆ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಹೈಕೋರ್ಟ್ ಪೀಠಕ್ಕೆ ಸೇರಿಸುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಹಲವು ವಿಷಯಗಳಲ್ಲಿ ಮತ್ತೆ, ಮತ್ತೆ ಅನ್ಯಾಯವಾಗುತ್ತಿದೆ. ಬಾರ್ ಅಸೋಸಿಯೇಶನ್ ಪ್ರಮುಖರು ದಿನಾಂಕ ನಿಗದಿ ಮಾಡಿದರೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ಮಾಡೋಣ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗುವಂತೆ ಮಂಗಳೂರಿನ ಹೈಕೋರ್ಟ್ ಪೀಠಕ್ಕೆ ಉತ್ತರ ಕನ್ನಡ ಸೇರಲು ಬಿಡುವುದಿಲ್ಲ.
ದಕ್ಷಿಣ ಕನ್ನಡ ಬೆಳೆದಿದೆ. ಉತ್ತರ ಕನ್ನಡ ಬಡತನದಲ್ಲಿದೆ. ಉತ್ತರ ಕನ್ನಡ ಧಾರವಾಡದ ಬದಲು ಮಂಗಳೂರು ಪೀಠಕ್ಕೆ ಸೇರಿದರೆ ವಕೀಲರಿಗೆ ಮಾತ್ರವಲ್ಲ ಜಿಲ್ಲೆಯ ಜನಸಾಮಾನ್ಯರಿಗೂ ತೊಂದರೆಯಾಗುತ್ತದೆ. ಹೈಕೋರ್ಟ್ನಲ್ಲಿ ಒಂದೊಂದು ಪ್ರಕರಣ ವಿಚಾರಣೆಗೆ ಬರಲು ವರ್ಷಗಟ್ಟಲೇ ಕಾಯಬೇಕು. ಇನ್ನಷ್ಟು ಸಮಸ್ಯೆ ಉದ್ಭವವಾಗುತ್ತದೆ. ಇದರಿಂದ ಹೋರಾಟಕ್ಕೆ ನನ್ನ ಬೆಂಬಲವಿದೆ.
ಗಡಿ ಭಾಗದಲ್ಲಿರುವ ಉತ್ತರ ಕನ್ನಡಕ್ಕೆ ಯಾವಾಗಲೂ ಅಭಿವೃದ್ಧಿಯಲ್ಲಿ ಅನ್ಯಾಯವಾಗುತ್ತಲೇ ಇದೆ. ಈ ವಿಷಯದಲ್ಲೂ ಮತ್ತೆ ತೊಂದರೆ ಬೇಡ. ಹೈಕೋರ್ಟ್ ಪೀಠದ ವಿಷಯದಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಂದಾಗಿ ಹೋರಾಟ ಮಾಡೋಣ. ಸುಪ್ರೀಂ ಕೋರ್ಟ್ನಲ್ಲಿ ಈ ಸಂಬಂಧ ಒಂದು ಪಿಐಎಲ್ ದಾಖಲು ಮಾಡಬೇಕು.