ಸತ್ಯ ಸಾಯಿ ಸೇವಾ ಸಮಿತಿ ಲೋಗೋ  
ಉತ್ತರ ಕನ್ನಡ

ಭಾನುವಾರ ಕಾರವಾರದಲ್ಲಿ ಯುನಿಟಿ ರನ್‌ ಮತ್ತು ರೈಡ್‌

ಕಾರವಾರ: ಉತ್ತರ ಕನ್ನಡ ಸತ್ಯಸಾಯಿ ಸೇವಾ ಸಂಸ್ಥೆಯಿಂದ ಫಿಟ್ ಇಂಡಿಯಾ ಸಹಯೋಗದಲ್ಲಿ ಮಾ.15 ರಂದು ಕಾರವಾರದಲ್ಲಿ `ಯುನಿಟಿ ರನ್ ಎಂಡ್ ರೈಡ್' ಎಂಬ ಮ್ಯಾರಾಥಾನ್ ಹಾಗೂ ಸೈಕ್ಲಿಂಗ್‌ನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಅಧ್ಯಕ್ಷ ರಾಮದಾಸ್ ಆಚಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಸಾಯಿ ಬಾಬಾ ಅವರ 101ನೇ ಜಯಂತಿಯ ಅಂಗವಾಗಿ ಹಾಗೂ ಪುಟ್ಟರ್ತಿಯಿಂದ ಐದು ದೈವಿಕ ರಥಗಳ ಮೂಲಕ ಹೊರಟಿರುವ ಜ್ಯೋತಿಗಳಲ್ಲಿ ಒಂದು ಕಾರವಾರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಈ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಸತ್ಯಸಾಯಿ ಸಂಘಟನೆಯ ರಾಜ್ಯಾಧ್ಯಕ್ಷ ಪದ್ಮನಾಭ ಫೈ, ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ ಹಾಗೂ ಇತರರು ಸ್ಪರ್ಧೆಗಳಿಗೆ ಚಾಲನೆ ನೀಡುವರು ಎಂದರು.
ನಗರದ ಮಾಲಾದೇವಿ ಮೈದಾನದಲ್ಲಿ ಮಾ.15 ರಂದು ಬೆಳಗ್ಗೆ 5.30 ಕ್ಕೆ ಎಲ್ಲ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ. ಮ್ಯಾರಾಥಾನ್‌ನಲ್ಲಿ ಕಾರ್ಯಕ್ರಮದಲ್ಲಿ 3 ಕಿಮೀ, 5 ಕಿಮೀ ಹಾಗೂ 10 ಕಿಮೀ ಓಟಗಳನ್ನು ಆಯೋಜಿಸಲಾಗಿದೆ. 15 ವರ್ಷ ಒಳಪಟ್ಟವರು ಮಾತ್ರ ಭಾಗವಹಿಸಬಹುದಾಗಿದೆ. ಸುಮಾರು 2 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸಿದ ಎಲ್ಲರಿಗೆ ಉಚಿತ ಟಿ.ಶರ್ಟ್ ಹಾಗೂ ಇ-ಪ್ರಮಾಣಪತ್ರ, ಉಪಹಾರ ನೀಡಲಾಗುವುದು ಎಂದರು. ಮಹಿಳೆಯರಿಗೆ 16 ಕಿಮೀ, ಪುರುಷರಿಗೆ 22 ಕಿಮೀ ಸೈಕ್ಲಿಂಗ್‌ನಲ್ಲಿ ನಡೆಯಲಿದೆ. 340 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ರಥ ಸಂಚಾರ:

ಜಿಲ್ಲಾ ಸಂಯೋಜಕ ಜಿ.ಡಿ. ಮನೋಜ್ ಮಾತನಾಡಿ, ಪ್ರಶಾಂತಿ ನಿಲಯಂನಿAದ ಐದು ದೈವಿಕ ರಥಗಳು ಏಪ್ರಿಲ್ 27, 2025ರಂದು ದೇಶದ ವಿವಿಧ ಭಾಗಗಳಿಗೆ ಪ್ರಯಾಣ ಆರಂಭಿಸಿದ್ದು, ಅವುಗಳಲ್ಲಿ ಪ್ರೇಮ ಪ್ರವಾಹಿನಿ ದೈವಿಕ ರಥವು ಮಾ. 16 ರಂದು ಭಟ್ಕಳ ತಾಲೂಕಿನ ಗಡಿಯ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸಲಿದೆ. ಏಪ್ರಿಲ್ 3ರವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ, ಏಪ್ರಿಲ್ 4ರಂದು ಹಳಿಯಾಳ ತಾಲೂಕಿನ ಪಾಳದ ಮೂಲಕ ಬೆಳಗಾವಿ ಜಿಲ್ಲೆಗೆ ತೆರಳಲಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ 19 ದಿನಗಳ ಕಾಲ ಈ ರಥ ಸಂಚರಿಸಲಿದ್ದು, ಶ್ರೀ ಸತ್ಯಸಾಯಿ ಸೇವಾ ಸಮಿತಿಗಳು ಹಾಗೂ ಭಜನಾ ಮಂಡಳಿಗಳಲ್ಲಿ ಸ್ವಾಮಿಯ ಆಸೀನ ರಥವು ಭಕ್ತರಿಗೆ ದರ್ಶನ ನೀಡಲಿದೆ. ಮಾರ್ಚ್ 25 ರಿಂದ ನಾಲ್ಕು ದಿನಗಳ ಕಾಲ ಕಾರವಾರದಲ್ಲಿ ರಥವು ತಂಗಲಿದ್ದು, ಕೊನೆಯ ದಿನ ಟ್ಯಾಗೋರ್ ಕಡಲತೀರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂಡಿಯನ್ ಐಡಲ್ 14ರ ಗಾಯಕಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮಿತಿಯ ತಿಮ್ಮಯ್ಯ ಮಿರಾಶಿ, ಸುನೀಲ್ ಅಣ್ವೇಕರ್ ಹಾಗೂ ದಯಾನಂದ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
...........