ಯುನಿಟಿ ರನ್‌ಗೆ ಚಾಲನೆ ದೊರೆಯಿತು
ಕಾರವಾರ: ಸತ್ಯ ಸಾಯಿಬಾಬಾ ಅವರ `ಲವ್ ಆಲ್ ಸರ್ವ್ ಆಲ್' ಮತ್ತು `ಹೆಲ್ಪ್ ಯುವರ್ ಹರ್ಟ್ ನೆವರ್' ಎಂಬ ಮಹಾ ಮಂತ್ರವನ್ನು ಜಗತ್ತಿನಾದ್ಯಂತ ಪಸರಿಸುವ ಗುರಿಯನ್ನು ಹೊಂದಲಾಗಿದೆ ಎಂದು ರಾಜ್ಯ ಸತ್ಯ ಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಎಂ.ಪದ್ಮನಾಭ ಪೈ ಹೇಳಿದರು.
ಸತ್ಯ ಸಾಯಿಬಾಬಾ ಅವರ 101 ಜನ ಜನ್ಮ ದಿನಾಚರಣೆಯ ಅಂಗವಾಗಿ ನಗರದಲ್ಲಿ ಉತ್ತರ ಕನ್ನಡ ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಫಿಟ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಯುನಿಟಿ ರನ್ ಆ್ಯಂಡ್ ರೈಡ್ ಎಂಬ ಮ್ಯಾರಾಥಾನ್ ಹಾಗೂ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯ ಸಾಯಿಬಾಬಾ ಅವರ ಮಹಾ ಮಂತ್ರವನ್ನು ತಿಳಿಸುವ ಸಲುವಾಗಿ ದೇಶದ 60 ಪಟ್ಟಣಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸ್ಪರ್ಧೆಯಲ್ಲಿ ಸೋಲು, ಗೆಲುವು ಎಂಬುದಿಲ್ಲ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂದರು.
ಎಸ್‌ಪಿ ದೀಪನ್ ಎಂ.ಎನ್.ಮಾತನಾಡಿ, ಆರೋಗ್ಯವೇ ಭಾಗ್ಯ. ಒತ್ತಡದ ದಿನದಲ್ಲಿ ಆರೋಗ್ಯಕ್ಕಾಗಿ ಇಂಥ ಕಾರ್ಯಕ್ರಮಗಳು ಬೇಕಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮಗಳು ನಡೆದು ಎಲ್ಲರೂ ಒಂದೇ ಎಂಬ ಭಾವನೆ ಮೂಡಲಿ ಎಂದರು.
ಸಂಸ್ಥೆಯ ಜಿಲ್ಲಾ ಅಧ್ಯಕ್ಷ ರಾಮದಾಸ ಆಚಾರಿ, ಗೋವಾ ಸತ್ಯ ಸಾಯಿ ಸಂಸ್ಥೆಗಳ ಅಧ್ಯಕ್ಷ ಮಹೇಶ ಪಾವಸ್ಕರ್, ರಾಜ್ಯ ಸೇವಾ ಸಂಯೋಜಕಿ ಪ್ರಿಯಾ ಪೈ, ಯುವ ಸಂಯೋಜಕ ವೆಂಕಟೇಶ ಬಡಿಗೇರ, ಆಧ್ಯಾತ್ಮಿಕ ಸಂಯೋಜಕ ಸುರೇಶ ಶೆಟ್ಟಿ, ಯುವ ಸಂಯೋಜಕ ನಂದಕುಮಾರ ಭಟ್, ತಿಮ್ಮಯ್ಯ ಮಿರಾಶಿ, ಮೋಹಿತ್ ಶೇಟ್, ಸೇವಾದಳದ ಸಂಯೋಜಕಿ ರೇಷ್ಮಾ ಬಾಡಕರ್, ಜಿಲ್ಲಾ ಸಂಯೋಜಕ ಜಿ.ಡಿ.ಮನೋಜೆ ಇದ್ದರು.
ಮಾಲಾದೇವಿ ಮೈದಾನದಿಂದ ವಿವಿಧ ವಿಭಾಗಗಳಲ್ಲಿ 3 ಕಿಮೀ, 5 ಕಿಮೀ ಹಾಗೂ 10 ಕಿಮೀ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಮಹಿಳೆಯರಿಗಾಗಿ 16 ಕಿಮೀ ಹಾಗೂ ಪುರುಷರಿಗಾಗಿ 22 ಕಿಮೀ ಸೈಕಲ್ ಜಾಥಾ ಕೂಡ ಆಯೋಜಿಸಲಾಗಿತ್ತು. ಮಕ್ಕಳು, ವೃದ್ಧರು, ಮಹಿಳೆಯರು ಸೇರಿ ಸುಮಾರು 2 ಸಾವಿರಕ್ಕೂ ಅಽಕ ಜನ ಇದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.