ಉಳವಿ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ಕಾರವಾರ: ಜನವರಿ 25 ರಿಂದ ಫೆ.5 ರವರೆಗೆ ಉಳವಿಯ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆಬ್ರವರಿ 3 ರಂದು ಮಹಾ ರಥೋತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಉಳವಿ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಸಂಜಯ ಬಸವರಾಜ ಕಿತ್ತೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜ.25 ರಂದು ಬೆಳಗ್ಗೆ ಧ್ವಜಾರೋಹಣದ ಮೂಲಕ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ರಾತ್ರಿ ರಥಗಳ ಪೂಜೆ, ಸೀಮೆ ಕಟ್ಟುವ ಕಾರ್ಯಕ್ರಮಗಳು ನಡೆಯಲಿವೆ. ಜ. 26 ರಂದು ಪಲ್ಲಕ್ಕಿ ಉತ್ಸವ, ಜ. 27 ರಂದು ಭೂಮಿ ಪೂಜೆ, ನವಧಾನ್ಯ ಹಾಕುವುದು, ಜ.28 ರಂದು ಹುಂಡಿಗಳ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಜ.29 ರಂದು ಪಲ್ಲಕ್ಕಿ ಉತ್ಸವ, ರಕ್ಷಾದೇವಿ ಸಣ್ಣ ರಥೋತ್ಸವ, ಜ.30 ರಂದು ವೀರಭದ್ರ ಸಣ್ಣ ರಥೋತ್ಸವ, 31 ರಂದು ಎತ್ತಿನ ಕಾಯುವ ಬಸವಣ್ಣನ ಸಣ್ಣ ರಥೋತ್ಸವ, ಫೆ.1 ರಂದು ಭಾರತ ಹುಣ್ಣಿಮೆ ಎಲ್ಲ ದೇವರ ಸಣ್ಣ ರಥೋತ್ಸವ, ಫೆ.2 ರಂದು ಚೆನ್ನ ಬಸವೇಶ್ವರರ ರಥಾರೋಹಣ, ಫೆ. 3 ರಂದು ಸಾಯಂಕಾಲ 4 ಗಂಟೆಗೆ ಮಹಾ ರಥೋತ್ಸವನಡೆಯಲಿದೆ. ಆರ್.ವಿ.ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ವಿವಿಧ ಅಽಕಾರಿಗಳು ಅತಿಥಿಗಳಾಗಿ ಪಾಲ್ಗೊಳ್ಳುವರು. ಫೆ. 4 ರಂದು ಬಯಲು ಕುಸ್ತಿ, ಫೆ. 5 ರಂದು ಓಕಳಿ ಸಣ್ಣ ರಥೋತ್ಸವದೊಂದಿಗೆ ಜಾತ್ರಾ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ವಿವರಿಸಿದರು.
ಎಂಎಲ್‌ಸಿ ಗಣಪತಿ ಉಳ್ವೇಕರ್ ಮಾತನಾಡಿ, ಇದು ಎತ್ತಿನ ಬಂಡಿಗಳ ಜಾತ್ರೆ ಎಂದು ಪ್ರಸಿದ್ಧ ಕಲ್ಯಾಣ ಕರ್ನಾಟಕ ಭಾಗದ ರೈತರು ತಮ್ಮ ಎತ್ತಿನ ಬಂಡಿಯಲ್ಲಿ ಜಾತ್ರೆಗೆ ಬಂದು ಬೆಳೆ ಸರಿಯಾಗಿ ಆಗಲಿ ಎಂದು ಬೇಡಿಕೊಳ್ಳುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಜಾನುವಾರುಗಳ ಗಂಟು ರೋಗದಿಂದ ಸಮಸ್ಯೆ ಉಂಟಾಗಿತ್ತು. ಜಾತ್ರೆಗೆ ಎತ್ತುಗಳ ಜತೆ ಬರದಂತೆ ಒಂದು ವರ್ಷ ಮನವಿ ಮಾಡಿದ್ದೂ ಇದೆ. ಈ ಬಾರಿ ಯಾವುದೇ ನಿರ್ಬಂಧವಿಲ್ಲ ಎಂದರು.
ಟ್ರಸ್ಟ್ ಕಮಿಟಿ ಸದಸ್ಯ ವೀರೇಶ ಕಂಬಳಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ, ಸಾರಾಯಿ ಮುಕ್ತ ಜಾತ್ರೆಯಾಗಿ ಮಾಡಲು ನಾವು ಕಮಿಟಿಯಿಂದ ಪ್ರಯತ್ನ ನಡೆಸಿದ್ದೇವೆ. ಜಾತ್ರೆಗೆ ಬರುವವರು ಪ್ಲಾಸ್ಟಿಕ್ ತರಬಾರದು ಎಂಬುದು ನಮ್ಮ ಮನವಿ. ಸಾರಾಯಿ ಮಾರುವವರ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ ಎಂದರು. ಜಾತ್ರೆಗೆ ಬರುವ ಭಕ್ತರು ಕಾಡಿಗೆ ಹೋಗಿ ಮರ, ಗಿಡ, ಬೆತ್ತ ಕಡಿಯಬಾರದು. ಕಾಡಿನೊಳಗೆ ಬೆಂಕಿ ಹಾಕಬಾರದು ಎಂಬುದು ನಮ್ಮ ಮನವಿ ಎಂದರು.
ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮುಕಾಶಿ ಮಾತನಾಡಿ, ಜಾತ್ರೆಗೆ ಬರುವವರಿಗೆ ಲೈಟ್ ವ್ಯವಸ್ಥೆ ಮಾಡಲು ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರು ತಕ್ಷಣ ಸ್ಪಂದಿಸಿದ್ದು, 3 ಲಕ್ಷ ರೂ.ವೆಚ್ಚದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಶಾಸಕ ಆರ್.ವಿ.ದೇಶಪಾಂಡೆ ಅವರು ಅಧಿಕಾರಿಗಳ ಜೊತೆ ಮಾತನಾಡಿ, ರಸ್ತೆ ದುರಸ್ತಿಗೆ ಸೂಚಿಸಿದ್ದಾರೆ. ಈ ಬಾರಿ 10 ಎಲ್‌ಇಡಿ ಸ್ಕ್ರೀನ್ ಹಾಗೂ 100 ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯಿಂದ ಸಂಚಾರಿ ಶೌಚಗೃಹ ತರಿಸಲಾಗುತ್ತಿದೆ ಎಂದರು. ಮಠದ ಅರ್ಚಕ ಶಂಕ್ರಯ್ಯ ಕಲ್ಮಠ ಇದ್ದರು.
ವಸತಿಗೃಹ ಉದ್ಘಾಟನೆ
ಭಕ್ತರ ಸುಮಾರು 3 ಕೋಟಿ ರೂ. ದೇಣಿಗೆಯಿಂದ ನಿರ್ಮಾಣ ಮಾಡಿದ ವಸತಿಗೃಹಗಳ ಉದ್ಘಾಟನಾ ಕಾರ್ಯಕ್ರಮವು ಜ.25 ರಂದು ನಡೆಯಲಿದೆ. ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ವಸತಿಗೃಹ ಉದ್ಘಾಟಿಸುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಕಮಿಟಿ ತಿಳಿಸಿದೆ.