ಯುಜಿಡಿ ಕಾಮಗಾರಿ  
ಉತ್ತರ ಕನ್ನಡ

ಅವೈಜ್ಞಾನಿಕ ಒಳಚರಂಡಿ ಕಾಮಗಾರಿ

ಕಾರವಾರ: ನಗರದ ಕಾಜುಬಾಗದಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕ ಸಂಚಾಕ್ಕೆ ವ್ಯತ್ಯಯವಾಗಿದೆ. ಯೋಜನೆ ಬಗ್ಗೆ ನಾಗರಿಕರಿಂದ ಆಕ್ಷೇಪವೂ ಕೇಳಿ ಬಂದಿದೆ.
ನಗರದ ಸರ್ಕಾರಿ ಪದವಿ ಕಾಲೇಜ್ ಸಮೀಪದಿಂದ ನಂದನಗದ್ದಾ ಕ್ರಾಸ್‌ವರೆಗೆ ಸುಮಾರು 1.4 ಕಿಮೀ ಒಳ ಚರಂಡಿ ಸಂಪರ್ಕ ಒದಗಿಸುವ 2 ಕೋಟಿ ರೂ. ಕಾಮಗಾರಿಯನ್ನು ನಗರೋತ್ಥಾನ -4 ರ ಅಡಿ ಕೈಗೊಳ್ಳಲಾಗಿದೆ. ಇದರಿಂದ 60 ಕ್ಕೂ ಹೆಚ್ಚು ಕಟ್ಟಡಗಳಿಗೆ ಒಳ ಚರಂಡಿ ಸಂಪರ್ಕ ಸಿಗಲಿದೆ ಎಂಬುದು ನಗರಸಭೆ ಅಽಕಾರಿಗಳು ನೀಡುವ ಮಾಹಿತಿಯಾಗಿದೆ.
ಆದರೆ, ಅದಕ್ಕಾಗಿ ಸುವ್ಯವಸ್ಥಿತ ಕಾಂಕ್ರಿಟ್ ರಸ್ತೆಯನ್ನು ಒಡೆದು ಹಾಕಲಾಗಿದೆ. ಮತ್ತು ಒಳಚರಂಡಿ ಕಾಮಗಾರಿಗೆ ಅತಿ ಕಡಿಮೆ ವ್ಯಾಸದ ಎಚ್‌ಡಿಪಿಐ ಪೈಪ್ ಅಳವಡಿಸಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಅಗೆದು ಹಾಕಿದ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ರಾಡಿಯಾಗಿ ಓಡಾಟಕ್ಕೆ ತೊಂದರೆ ಉಂಟಾಗುವ ಆತಂಕವಿದೆ.
ಮೊದಲ ಯೋಜನೆ ವಿಫಲ:
ಈಗಾಗಲೇ ಸಾಕಷ್ಟು ಅನಾಹುತಗಳಿಗೆ ಕಾರಣವಾದ ಹಾಲಿ ಇರುವ ಒಳಚರಂಡಿ ವ್ಯವಸ್ಥೆಗೆ ಮತ್ತಷ್ಟು ಸಂಪರ್ಕ ನೀಡುತ್ತಿರುವುದಕ್ಕೆ ಇನ್ನಷ್ಟು ಆಕ್ಷೇಪ ಕೇಳಿ ಬಂದಿದೆ. 2007 ರಲ್ಲಿ ಕುಡ್ಸೆಂಪ್ ಯೋಜನೆಯಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ನಗರದ ನಡುವೆ ಇರುವ 8 ವಾರ್ಡ್ಗಳಿಗೆ ಸಂಪರ್ಕ ಕಲ್ಪಿಸುವ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. 14 ಕಿಮೀ ಒಳ ಚರಂಡಿ ಸಂಪರ್ಕ ಜಾಲ ನೂರಾರು ಚೇಂಬರ್‌ಗಳನ್ನು ರಚಿಸಲಾಗಿತ್ತು. 2,233 ಮನೆ, ಹೋಟೆಲ್ ಮುಂತಾದವುಗಳ ಸಂಪರ್ಕ ಕಲ್ಪಿಸಲಾಗಿದೆ.
ಆದರೆ, ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಒಳಚರಂಡಿ ವ್ಯವಸ್ಥೆ ನಗರದಲ್ಲಿ ಸಂಪೂರ್ಣ ಹದಗೆಟ್ಟಿದೆ. ಸಂಪರ್ಕ ಜಾಲದ ಹಲವು ಮ್ಯಾನ್ ಹೋಲ್‌ಗಳು ಇದ್ದ ಸ್ಥಳದಿಂದ ಕುಸಿದಿವೆ. ಇದರಿಂದ ಪೈಪ್ ಹಾಗೂ ಮ್ಯಾನ್‌ಹೋಲ್ ಸಂಪರ್ಕ ತಪ್ಪಿ ಹಲವೆಡೆ ತ್ಯಾಜ್ಯದ ನೀರು ನಿರಂತರವಾಗಿ ಉಕ್ಕಿ ಹರಿಯುತ್ತಿರುತ್ತದೆ. ನೀರಿನ ಮೂಲಗಳಿಗೆ ಸೇರುತ್ತಿರುವ ಆತಂಕವಿದೆ. ನಗರಸಭೆ ಸಿಬ್ಬಂದಿ ಮ್ಯಾನ್ ಹೋಲ್‌ಗಳಿಂದ ತ್ಯಾಜ್ಯವನ್ನು ಖಾಲಿ ಮಾಡುವ ಕೆಲಸದಲ್ಲಿ ನಿರತವಾಗಿರುವುದು ಸಾಮಾನ್ಯವಾಗಿದೆ.
ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಪಕ್ಕದ ಕೋಣೆನಾಲಾಕ್ಕೆ ಅಶುದ್ಧ ನೀರು ಸೇರುತ್ತಿದೆ ಎಂಬ ಆರೋಪವಿದೆ. ಅರಬ್ಬಿ ಸಮುದ್ರಕ್ಕೆ ನಗರದ ಮೂರ್ನಾಲ್ಕು ನಾಲಾಗಳಿಂದ ಮಲ ತ್ಯಾಜ್ಯದ ನೀರು ಸೇರ್ಪಡೆಯಾಗುತ್ತಿದೆ ಎಂಬ ಕಾರಣಕ್ಕೆ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ನಗರಸಭೆಗೆ ದೊಡ್ಡ ಪ್ರಮಾಣದ ದಂಡ ವಿಽಸಿದೆ. ಹೀಗಿರುವಾಗ ಅದೇ ವ್ಯವಸ್ಥೆಗೆ ಇನ್ನಷ್ಟು ಸಂಪರ್ಕವನ್ನು ಕೊಡುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಹೊಸ ಯೋಜನೆ ಮಂಜೂರಿಯಿಲ್ಲ
ನಗರದಲ್ಲಿ ಉಳಿದ ಹಲವು ವಾರ್ಡ್ಗಳಿಗೆ ಒಳ ಚರಂಡಿ ಸಂಪರ್ಕ ಕಲ್ಪಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 240 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಿ, ಅನುದಾನಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಇದುವರೆಗೂ ಅನುದಾನ ಮಂಜೂರಿಯಾಗಿಲ್ಲ. ಇದರಿಂದ ನಗರೋತ್ಥಾನ ಯೋಜನೆಯಲ್ಲಿಯೇ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.