ಸಿದ್ದಾಪುರದ ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಜಿ. ನಾಗರಾಜ ಮಾತನಾಡಿದರು. ದೇವರಾಜ ಹಿತ್ತಲಕೊಪ್ಪ ಇದ್ದರು.  
ಉತ್ತರ ಕನ್ನಡ

‘ಗ್ಯಾರಂಟಿ’ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ

ಸಿದ್ದಾಪುರ: ಸರ್ಕಾರಿ ಯೋಜನೆಗಳು ಜನರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಕೆಲವು ದಾಖಲೆಗಳ ತೊಂದರೆಯಿಂದ ಸಾಕಷ್ಟು ಜನರಿಗೆ ಪಂಚ ಗ್ಯಾರಂಟಿ ಯೋಜನೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಕೆ.ಜಿ. ನಾಗರಾಜ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಟಾನಗೊಳಿಸುವಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಆಗಬಾರದೆಂದು ಜಿಲ್ಲೆಯಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಉಚಿತ ವಿದ್ಯುತ್ ಯೋಜನೆಗಳು ಜನತೆಗೆ ಅನುಕೂಲವಾಗಿದೆ ಎಂದರು.
ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೆಸ್ಕಾಂ, ಆಹಾರ ಇಲಾಖೆ ಅಧಿಕಾರಿಗಳು ಗ್ಯಾರಂಟಿ ಯೋಜನೆಯಲ್ಲಿ ಆಗಿರುವ ಪ್ರಗತಿಯನ್ನು ತಿಳಿಸಿದರು.
ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಮಾತನಾಡಿ, ಅಧಿಕಾರಿಗಳು ಪ್ರಗತಿಯ ಮಾಹಿತಿ ನೀಡುವ ಪುಸ್ತಕದಲ್ಲಿ ಸಂಬಂಧಿಸಿದ ಅಧಿಕಾರಿಯ ಸಹಿ ಹಾಗೂ ಸೀಲ್ ಕಡ್ಡಾಯವಾಗಿ ಇರಬೇಕು ಎಂದು ಸೂಚನೆ ನೀಡಿದರು.
ಬಸ್ ನಿಲ್ದಾಣದ ಸ್ವಚ್ಛತೆ, ಶೌಚಗೃಹದ ಅವ್ಯವಸ್ಥೆ ಕುರಿತು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಈ ಕುರಿತು ಕ್ರಮವಹಿಸುವಂತೆ ಹಾಗೂ ಮುಂದಿನ ಸಭೆಗೆ ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಕಾರವಾರದಿಂದ ಕೌಶಲಾಭಿವೃದ್ಧಿ ಅಧಿಕಾರಿಗಳನ್ನು ಕರೆಯಿಸಬೇಕು ಎಂದು ಒತ್ತಾಯಿಸಿದರು.