ಡೆಮು ರೈಲು 
ಉತ್ತರ ಕನ್ನಡ

ದಾಂಡೇಲಿ ಅಳ್ನಾವರ ನಡುವೆ ಡೆಮು ರೈಲು

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ದಾಂಡೇಲಿ ನಡುವೆ ಡೀಸೆಲ್ ಮಲ್ಟಿಪಲ್‌ ಯೂನಿಟ್ (ಡೆಮು) ರೈಲು ಸೇವೆ ಪ್ರಾರಂಭಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
ಶೀಘ್ರದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ರೈಲ್ವೆ ಬೋರ್ಡ್ ಮಾಹಿತಿ ನೀಡಿದೆ.
4 ಬೋಗಿಗಳ ಎರಡು ಡೆಮು ರೈಲು ದಿನವಿಡೀ ಓಡಾಟ ನಡೆಸಲಿದೆ. ಬೆಳಗ್ಗೆ 5.30, 7.40 ಹಾಗೂ ಸಾಯಂಕಾಲ 7.30 ಕ್ಕೆ ರೈಲು ಅಳ್ನಾವರದಿಂದ ಹೊರಟು ಮುಕ್ಕಾಲು ಗಂಟೆಯಲ್ಲಿ ದಾಂಡೇಲಿ ತಲುಪಲಿದೆ.
ಬೆಳಗ್ಗೆ 6.45, 8.40. ಹಾಗೂ 8.30.ಕ್ಕೆ ರೈಲು ದಾಂಡೇಲಿ ಬಿಡಲಿದೆ. ರೈಲಿಗೆ ಎರಡು ಜನ ಲೋಕೋ ಪೈಲಟ್ ಹಾಗೂ ಇಬ್ಬರು ಟಿಟಿಗಳನ್ನು ನೇಮಕ ಮಾಡಬೇಕು ಎಂದು ಬೋರ್ಡ್ ಸೂಚಿಸಿದೆ.

ಐತಿಹಾಸಿಕ ನಿಲ್ದಾಣ:

ದಾಂಡೇಲಿ- ಅಳ್ನಾವರ-ಧಾರವಾಡ ನಡುವೆ 1800 ರಲ್ಲೇ ರೈಲ್ವೆ ಹಳಿ ಇತ್ತು. ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಸಾಗಿಸಲು ಬ್ರಿಟಿಷರು ರೈಲ್ವೆ ಹಳಿ ಹಾಕಿದ್ದರು. ಆದರೆ, ಆಗ ನ್ಯಾರೋ ಗೇಜ್ ಆಗಿತ್ತು. ಇದರಿಂದ ಸ್ವಾತಂತ್ರಾ ನಂತರ ಕೆಲ ವರ್ಷ ರೈಲು ಓಡಾಟ ಬಂದ್ ಆಗಿತ್ತು. ನಂತರ ನ್ಯಾರೋ ಗೇಜ್ ಹಳಿಯನ್ನು ಬ್ರಾಡ್ ಗೇಜ್ ಗೆ ಬದಲಾಯಿಸಲಾಯಿತು. ಆದರೂ ಗೂಡ್ಸ್ ರೈಲು ಬಂತೇ ಹೊರತು ಪ್ರಯಾಣಿಕರ ರೈಲು ಬಂದಿರಲಿಲ್ಲ. 2020 ರಲ್ಲಿ ಆಗ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಧಾರವಾಡ-ದಾಂಡೇಲಿ ನಡುವೆ ಪ್ರಯಾಣಿಕರ ರೈಲು ಸೇವೆ ಪ್ರಾರಂಭಿಸಿದ್ದರು. ಆದರೆ, ಕೋವಿಡ್ ಕಾರಣ ಮತ್ತೆ ಪ್ರಯಾಣಿಕರ ರೈಲು ಮತ್ತೆ ಬಂದ್ ಆಗಿತ್ತು. ಈ ನಡುವೆ ಮಾರ್ಗ ವಿದ್ಯುದೀಕರಣವೂ ಪೂರ್ಣಗೊಂಡಿದೆ. ಆದರೆ, ಮೆಮು ಬದಲು ಡೆಮು ರೈಲು ನೀಡಲಾಗಿದೆ‌.
ಸ್ಥಳೀಯರು ರೈಲಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಸಂಸದ ವಿಶ್ವೇಶ್ವರ ‌ಹೆಗಡೆ ಕಾಗೇರಿ ಅವರೂ ಈ ಬಗ್ಗೆ ಮನವಿ ಮಾಡಿದ್ದರು.
ಇತ್ತೀಚೆಗೆ ಆಗಮಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ದಾಂಡೇಲಿಗೆ ಪ್ರಯಾಣಿಕರ ರೈಲು ಸೇವೆ ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದರು.
.....