ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ  
ಉತ್ತರ ಕನ್ನಡ

ಇನ್ನೂ ಐದು ಕಡೆ ಜಲ ಸಾಹಸ ಕ್ರೀಡೆ ನಡೆಸಲು ಅನುಮತಿ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಣಯ
  • ಜೆತ್ನಾ ನೇತೃತ್ವದ ಕಮಿಟಿಯಿಂದ ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗಿತ್ತು.
ಕಾರವಾರ: ಜಿಲ್ಲೆಯ ಇನ್ನೂ ಕೆಲವು ಕಡಲ ತೀರಗಳಲ್ಲಿ ಜಲ ಸಾಹಸ ಕ್ರೀಡೆ ನಡೆಸಬಹುದು ಎಂದು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ(ಜೇತ್ನಾ) ವರದಿ ನೀಡಿದ್ದು, ಅಲ್ಲಿಯೂ ವಾಟರ್ ಸ್ಪೋಟ್ಸ್ ಪ್ರಾರಂಭಿಸಲು ಸೋಮವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ , ಹೊಸ ಸ್ಥಳಗಳಲ್ಲಿ ಗರಿಷ್ಠ ಸುರಕ್ಷತೆಯೊಂದಿಗೆ ವಾಟರ್ ಸ್ಪೋಟ್ಸ್ ಪ್ರಾರಂಭಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು.
ನದಿಬಾಗ, ಬಾಡದ ಕಾಗಾಲ್, ಕುಮಟಾ ಹೆಡ್ ಬಂದರು, ಧಾರೇಶ್ವರ ರಾಮನಗಿಂಡಿ, ಹೊನ್ನಾವರದ ಅಪ್ಸರಕೊಂಡ, ಕಾಸರಗೋಡು ಕಡಲ ತೀರಗಳಲ್ಲಿ ಹಾಗೂ ಹೊನ್ನಾವರ ಅರೆಸಾಮಿ ಕೆರೆ ಪ್ರದೇಶಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಡೆಸಬಹುದಾಗಿದೆ ಎಂದು ಜೆತ್ನಾ ವರದಿ ನೀಡಿದೆ.
ಕಾಸರಕೋಡು ಕಡಲ ತೀರದಲ್ಲಿ ಶಬ್ದಮಾಲಿನ್ಯವಿಲ್ಲದ ಇವಿ, ಸೋಲಾರ್ ಬಳಸುವ ಜಲಸಾಹಸ ಚಟುವಟಿಕೆಗಳನ್ನು ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ತಿಳಿಸಿದರು. ಕಾಸರಕೋಡು ಕಡಲತೀರದಲ್ಲಿ ಸುಸಜ್ಜಿತವಾದ ವಾಚ್ ಟವರ್ ನಿರ್ಮಿಸುವಂತೆ ತಿಳಿಸಿದ ಅವರು, ಕಡಲತೀರದ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಇಕೋ ಪಾರ್ಕ್ನ್ನು ನಿರ್ವಹಣೆ ಮತ್ತು ಆದಾಯ ಹಂಚಿಕೆ ಆಧಾರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.
ಗೋಕರ್ಣ ಮತ್ತು ಮುರುಡೇಶ್ವರದಲ್ಲಿ ಪ್ರಸ್ತುತ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವವರು ಪ್ರವಾಸಿಗರ ಆಕರ್ಷಣೆಗೆ ಹೆಚ್ಚುವರಿ ಚಟುವಟಿಕೆಗಳನ್ನು ನಡೆಸಲು ಅನುಮತಿ ಕೋರಿರುವ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಽಕಾರಿಗಳು ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಯಿಂದ ಅಗತ್ಯ ನಿರ್ದೇಶನ ಪಡೆದು ಕ್ರಮ ಕೈಗೊಳ್ಳುವಂತೆ ಮತ್ತು ಕಾರವಾರ ಕಡಲತೀರದಲ್ಲಿನ ಮಕ್ಕಳ ಉದ್ಯಾನವನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಂತೆ ಸೂಚಿಸಿದರು.
ಜಿಪಂ ಸಿಇಒ ಡಾ.ದಿಲೀಷ್ ಶಶಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ಭಟ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಸಭೆಯಲ್ಲಿದ್ದರು.