ಕಾರವಾರ: ಕುಮಟಾ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರನ್ನು ಕೊಲೆ ಮಾಡಿದ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಕೂಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಸೊರಬ ತಾಲೂಕಿನ ಚಂದ್ರಗುತ್ತಿ ಧನಂಜಯ ಚಂದ್ರಶೇಖರ್ ನಾಯ್ಕ ಶಿಕ್ಷೆಗೊಳಗಾದವರು. ಅಪರಾಽಗಳಿಗೆ ದಂಡ ವಿಽಸಿದ್ದು, ಆ ಹಣದಲ್ಲಿ 5 ಲಕ್ಷ ರೂ.ಗಳನ್ನು ಮೃತರ ಪತ್ನಿ ಸರಸ್ವತೀ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ.
2018 ರ ಅಕ್ಟೋಬರ್ 16 ರಂದು ಕೊಲೆ ನಡೆದಿತ್ತು. ಕುಮಟಾ ಇನ್ಸ್ಪೆಕ್ಟರ್ ಸಂತೋಷ ಶೆಟ್ಟಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ತನುಜಾ ಹೊಸ ಪಟ್ಟಣ ಅವರು 62 ಸಾಕ್ಷಿಗಳನ್ನು, 177 ದಾಖಲೆಗಳನ್ನು ಹಾಗೂ 15 ಮುದ್ದೆ ಮಾಲುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಸಮರ್ಥ ವಾದ ಮಂಡಿಸಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಸಾಂದರ್ಭಿಕ ಸಾಕ್ಷ್ಮಗಳು ಹಾಗೂ ವಾದ, ವಿವಾದಗಳನ್ನು ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಽÃಶ ಪರಮೇಶ್ವರ ಪ್ರಸನ್ನ ಬಿ.ಅವರು, ತೀರ್ಪು ಪ್ರಕಟಿಸಿದ್ದಾರೆ.
ಪೂಜೆಗೆ ಕರೆದು ಕೊಲೆ ಮಾಡಿದ್ದರು:
ವಿಶ್ವೇಶ್ವರ ಭಟ್ ಅವರ ಬಳಿಗೆ ಬಂದ ಧನಂಜಯ ನಾಯ್ಕ ತಾನು ಹೊಸ ಜಮೀನು ಕೊಂಡಿದ್ದೇನೆ ಅದರ ಪೂಜೆಗೆ ಬರಬೇಕು ಎಂದು ಭಟ್ಟರನ್ನು ಕರೆದೊಯ್ದಿದ್ದ. ಕೂಜಳ್ಳಿಯ ಸಮೀಪ ಮಂಜುನಾಥ ಹೆಗಡೆ ಜಮೀನಿನಲ್ಲಿ ಭಟ್ಟರ ತಲೆಗೆ ಕಾಯಿ ಸುಲಿಯುವ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ನಂತರ ಅದೇ ಜಮೀನಿನಲ್ಲಿ ಹೊಂಡ ತೋಡಿ ಶವವನ್ನು ಹೂತು ಹಾಕಲಾಗಿತ್ತು. ಮೊದಲ ದಿನ ವಿಶ್ವೇಶ್ವರ ಭಟ್ಟರ ಪತ್ನಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅವರನ್ನು ಬೈಕ್ ಮೇಲೆ ಕರೆದೊಯ್ಯುವುದನ್ನು ನೋಡಿದ ಸಾಕ್ಷಿದಾರರು ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಎರಡನೇ ದಿನ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ಮೂರನೇ ದಿನ ಶಿರಸಿಯಲ್ಲಿ ಇಬ್ಬರು ಅಪರಾಧಿಗಳನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿಯ ಮೇರೆಗೆ ಅಕ್ಟೋಬರ್ 19 ರಂದು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು.
ವಿಶ್ವೇಶ್ವರ ಭಟ್ಟರ ಚಿಕ್ಕಪ್ಪ ನಾಗೇಶ ಭಟ್ ಅವರಿಗೆ ಮಕ್ಕಳಿರಲಿಲ್ಲ. ಅವರು ತಮ್ಮ ಎಲ್ಲ ಜಮೀನನ್ನು ತಮ್ಮ ಪತ್ನಿಯ ಸಹೋದರಿಯ ಪತಿ ಕೂಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ ಹೆಸರಿಗೆ ವಿಲ್ ಮಾಡಿದ್ದರು. ಆದರೆ, ನಾಗೇಶ ಭಟ್ಟರು ಮೃತರಾದ ನಂತರ ಅವರ ಸಂಪೂರ್ಣ ಆಸ್ತಿ ಮಂಜುನಾಥ ಹೆಗಡೆ ಹೆಸರಿನಿಂದ ಕೈ ತಪ್ಪಿತ್ತು. ನಾಗೇಶ ಭಟ್ಟರ ಕುಟುಂಬಸ್ಥರಾದ ವಿಶ್ವೇಶ್ವರ ಭಟ್ ಹಾಗೂ ಇತರರಿಗೆ ಜಮೀನು ನೀಡಬೇಕು ಎಂದು ಕುಮಟಾ ನ್ಯಾಯಾಲಯ ತೀರ್ಪು ನೀಡಿತ್ತು. ಆಸ್ತಿ ಕೈ ತಪ್ಪಿದ ಸಿಟ್ಟು ಹಾಗೂ ವಿಶ್ವೇಶ್ವರ ಭಟ್ಟರು ಮಾಟ, ಮಂತ್ರ ಮಾಡಿಸುತ್ತಾರೆ ಎಂಬ ಸಿಟ್ಟಿನಲ್ಲಿ ಮಂಜುನಾಥ ಹೆಗಡೆ ಕೊಲೆ ಸಂಚು ರೂಪಿಸಿದ್ದ.
ಜೈಲಿನಲ್ಲಿ ಸಂಪರ್ಕ
ಮಂಜುನಾಥ ಹೆಗಡೆ ಕೊಲೆ ಮಾಡಲು ತನ್ನ ಸಹೋದರಿಯ ಮಗ ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಎಂಬಾತನನ್ನು ಆಯ್ದುಕೊಂಡಿದ್ದ. ಹರೀಶ ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜೈಲಿನಲ್ಲಿ ಆತನಿಗೆ ಚಂದ್ರಗುತ್ತಿ ಧನಂಜಯ ಚಂದ್ರಶೇಖರ್ ನಾಯ್ಕ ಪರಿಚಯವಾಗಿದ್ದ. ಮೂವರೂ ಸಂಚು ರೂಪಿಸಿ ಈ ಕಾರ್ಯ ಮಾಡಿದ್ದರು. ಈ ಕಾರ್ಯಕ್ಕೆ ಸಹಕರಿಸಿದ್ದಕ್ಕೆ ಧನಂಜಯ ನಾಯ್ಕನಿಗೆ 30 ಸಾವಿರ ರೂ.ಗಳನ್ನು ಪಾವತಿಸಲಾಗಿತ್ತು ಎನ್ನಲಾಗಿದೆ. ಮೃತರ ಗುರುತು ಸಿಗಬಾರದು ಎಂದು ಎಲ್ಲ ಬಟ್ಟೆಗಳನ್ನು ತೆಗೆದು ಅಘನಾಶಿನಿ ನದಿಗೆ ಎಸೆಯಲಾಗಿತ್ತು. ಅಪರಾಧಿಗಳು ಮೊಬೈಲ್ ಬಳಸಿರಲಿಲ್ಲ. ಆದರೆ, ಕೆಲವು ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಮೃತರ ಒಂದು ಉಂಗುರ ಹಾಗೂ ಭಟ್ಟರನ್ನು ಕರೆದೊಯ್ಯುವುದನ್ನು ನೋಡಿದ ಕೆಲವರು ಸಾಕ್ಷಿ ನುಡಿದಿದ್ದರಿಂದ ಕೊಲೆಗಾರರು ಕಂಬಿ ಎಣಿಸುವಂತಾಗಿದೆ.