ಟಿಎಚ್‌ಒ ಡಾ. ಸನಾ ನೇತೃತ್ವದ ತಂಡವು ಭಟ್ಕಳ ಪಟ್ಟಣದ ವಿವಿಧ ಸ್ಥಳಗಳಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಸೋಮವಾರ ದಾಳಿ ನಡೆಸಿ 3 ಕ್ಲಿನಿಕ್‌ಗಳನ್ನು ಸೀಜ್ ಮಾಡಿತು. 
ಉತ್ತರ ಕನ್ನಡ

ಭಟ್ಕಳದಲ್ಲಿ ಮೂರು ನಕಲಿ ಕ್ಲಿನಿಕ್ ಸೀಜ್

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಟಿಎಚ್‌ಒ ಡಾ. ಸನಾ ನೇತೃತ್ವದ ತಂಡದಿಂದ ದಾಳಿ
ಭಟ್ಕಳ: ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಟಿಎಚ್‌ಒ ಡಾ. ಸನಾ ನೇತೃತ್ವದ ತಂಡವು ಪಟ್ಟಣದ ವಿವಿಧ ಸ್ಥಳಗಳಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಸೋಮವಾರ ದಾಳಿ ನಡೆಸಿ 3 ಕ್ಲಿನಿಕ್‌ಗಳನ್ನು ಸೀಜ್ ಮಾಡಿದ್ದಾರೆ.
ಟಿಎಚ್‌ಒ ಡಾ. ಸನಾ, ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ ಡಾ. ಕುಮಾರ ಮೊಗೇರ, ಎಫ್‌ಡಿಎ ವೆಂಕಟೆಶ ನಾಯ್ಕ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಿವಾಸ, ಹಿರಿಯ ಆರೋಗ್ಯ ಅಧಿಕಾರಿ ರಾಮಪ್ಪ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಮಂಜುನಾಥ ಹಾಗೂ ಇತರ ಆರೋಗ್ಯ ಇಲಾಖಾ ಸಿಬ್ಬಂದಿ ಪಟ್ಟಣದಲ್ಲಿ 4 ಹಾಗೂ ಶಿರಾಲಿಯ ಕ್ಲಿನಿಕ್ ಒಂದರ ಮೇಲೆ ದಾಳಿ ನಡೆಸಿ ಪರಿಶೀಲಿಸಿತು. ಆಯಾ ಕ್ಲಿನಿಕ್‌ಗಳ ವೈದ್ಯರು ಹೊಂದಿರುವ ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್ ಹಾಗೂ ಯುನಾನಿ ಪದವಿ ಪ್ರಮಾಣಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಲಾಗಿದೆ. ಒಟ್ಟು 3 ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದ್ದು, ಮದಿನಾ ಕಾಲನಿಯ ಕ್ಲಿನಿಕ್ ಮಾಲೀಕರು ತಾವೆ ಖುದ್ದಾಗಿ ಬಂದ್ ಮಾಡಿದ್ದು ಅವರ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ. ಕ್ಲಿನಿಕ್‌ಗಳ ವಿರುದ್ಧದ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಟಿಎಚ್‌ಒ ಅವರು ತಿಳಿಸಿದ್ದಾರೆ.
ಪಟ್ಟಣ ಭಾಗ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಪರಿಶೀಲನಾ ಕಾರ್ಯ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರು ಅನಧಿಕೃತ ವೈದ್ಯರ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯಬಾರದು. ಸರ್ಕಾರಿ, ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯಬೇಕು ಎಂದು ಕೆಂದು ಟಿಎಚ್‌ಒ ಡಾ. ಸನಾ ಮನವಿ ಮಾಡಿದರು.