ಕಾರವಾರ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಸೇವೆಯನ್ನು ಮುಂದುವರಿಸುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಕಳೆದ 10 ರಿಂದ 15 ವರ್ಷಗಳಿಂದ ಅನ್-ಸ್ಕಿಲ್ಡ್, ಸಿಡಿಸಿ ಹಾಗೂ ಹೊರಗುತ್ತಿಗೆ ನೌಕರರಾಗಿ ಡಿ-ಗ್ರೂಪ್ ಹುದ್ದೆಯಲ್ಲಿ ಆಡಳಿತಾತ್ಮಕ ಹಾಗೂ ದೈನಂದಿನ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸುಮಾರು 1000 ನೌಕರರನ್ನು ಅಕ್ಟೋಬರ್ 31 ರಂದು ಸೇವೆಯಿಂದ ಬಿಡುಗಡೆಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಆದೇಶದಿಂದ ಸಾವಿರಾರು ಬಡ ಕುಟುಂಬಗಳ ಜೀವನೋಪಾಯಕ್ಕೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಈ ನೌಕರರ ಸೇವೆಯನ್ನು ಮುಂದುವರಿಸುವಂತೆ ಕೋರಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಅಮಿತಕುಮಾರ ನಾಗರಾಜ ಜೋಗಳೇಕರ, ರೇಣುಕಾ ಕುಡಾಳ್ಕರ್, ಸಹನಾ ದುರ್ಗೇಕರ್, ಪ್ರಹ್ಲಾದ್ ಜೋಗಳೇಕರ, ಸುರೇಶ್ ಕೊರವರ, ಶಹನಾಜ ರಾಮಾಪುರ, ಪರಶುರಾಮ ಬಿ. ಚಲವಾದಿ, ಶಿವರಂಜನ ಆಗೇರ, ರಾಘವೇಂದ್ರ ಮುರುಡೇಶ್ವರ, ಜಯಾ ಕಾರವಾರ ಉಪಸ್ಥಿತರಿದ್ದರು.