ಯಲ್ಲಾಪುರದ ಕಾಳಮ್ಮನಗರದಲ್ಲಿ ಹತ್ಯೆಗೀಡಾದ ರಂಜಿತಾ ಬನ್ಸೋಡೆ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಸತ್ಯಪ್ರಮೋದೇಂದ್ರ ಸರಸ್ವತೀ ಸ್ವಾಮೀಜಿ, ಮಂಜುನಾಥ ಕೆ.ಎಚ್., ಮಹಾಲಿಂಗ ಐಗಳಿ ಇತರರಿದ್ದರು. 
ಉತ್ತರ ಕನ್ನಡ

ರಾಕ್ಷಸಿ ಪ್ರವೃತ್ತಿ ತಡೆಯಲು ಯೋಚಿಸಿ

ಯಲ್ಲಾಪುರ: ಯಲ್ಲಾಪುರದ ರಂಜಿತಾರನ್ನು ಹಲಾಲ್ ಮಾದರಿಯಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ. ಕೊಲೆ ಮಾಡಿದ ವ್ಯಕ್ತಿ ಸತ್ತರೂ, ಕೊಲೆ, ಗೋಹತ್ಯೆ, ಲವ್‌ಜಿಹಾದ್‌ನಂತಹ ಕೃತ್ಯ ಮಾಡುವ ಮಾನಸಿಕತೆ ಸಾಯುವುದಿಲ್ಲ. ಅಂತಹ ಮಾನಸಿಕತೆ ಇಸ್ಲಾಂನ ಮೂಲದಲ್ಲೇ ಇದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಕ್ಷಸಿ ಪ್ರವೃತ್ತಿಯನ್ನು ತಡೆಯುವ ಬಗ್ಗೆ ಸರ್ಕಾರ, ರಾಜಕಾರಣಿಗಳು, ಸಮಾಜ ಚಿಂತನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಹಿಂದೂ ಸಂಘಟನೆಗಳು ಒಗ್ಗೂಡಿ ಬೀದಿಗಿಳಿದು ಹೋರಾಟ ಮಾಡಲಿವೆ ಎಂದರು.
ಯಲ್ಲಾಪುರದಲ್ಲಿ ದಲಿತ ಮಹಿಳೆ ಕೊಲೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಕಾಂಗ್ರೆಸ್‌ನ ಯಾವುದೇ ಸಚಿವರು, ಶಾಸಕರು ಭೇಟಿ ನೀಡಿಲ್ಲ. ದಲಿತ ಮಹಿಳೆಯನ್ನು ಅಮಾನವೀಯವಾಗಿ ಕೊಂದಿರುವ ವಿಚಾರ ಕಾಂಗ್ರೆಸ್ ಸರ್ಕಾರಕ್ಕೆ ಗಂಭೀರ ವಿಷಯವಾಗಿಲ್ಲ ಎಂದು ಟೀಕಿಸಿದರು.
ದಲಿತರನ್ನು ರಾಜಕಾರಣಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ದಲಿತರೆಲ್ಲ ಮುಂದಿನ ಚುನಾವಣೆಯಲ್ಲಿ ಒಂದು ಮತವನ್ನೂ ಕಾಂಗ್ರೆಸಿಗೆ ಹಾಕದೇ ತಕ್ಕ ಬುದ್ಧಿ ಕಲಿಸಬೇಕು ಎಂದರು.
ದೇಶದ್ರೋಹಿಗಳನ್ನು ತಡೆಯದೇ ಹೋದಲ್ಲಿ ಒಂದು ದಿನ ಶಾಸಕರ ಮನೆಯ ಮೇಲೂ ಧ್ವಜ ಹಾರಿಸುತ್ತಾರೆ ಎಂದು ಎಚ್ಚರಿಸಿದರು.
ಸರ್ಕಾರ, ಪೊಲೀಸ್ ಇಲಾಖೆ ಹೇಗೆ ಬೇಕಾದರೂ ನಡೆದುಕೊಳ್ಳುತ್ತವೆ. ಇದಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವೇ ಸಾಕ್ಷಿ. ಅಮಾನವೀಯವಾಗಿ ಆಕೆಯನ್ನು ಕೊಚ್ಚಿ ಕೊಂದಿರುವ ಪ್ರಕರಣದಲ್ಲಿ ಸಮರ್ಥ ವಾದ ಮಂಡಿಸದ ಕಾರಣ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕಿದೆ. ಇದು ಯಾವ ರೀತಿಯ ವ್ಯವಸ್ಥೆ ಎಂದು ಮತಾಲಿಕ ಪ್ರಶ್ನಿಸಿದರು.
ಕರ್ನಾಟಕ ಉತ್ತರ ರಾಜ್ಯದ ಗೌರವಾಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತೀ ಸ್ವಾಮೀಜಿ, ಜಿಲ್ಲಾಧ್ಯಕ್ಷ ಮಂಜುನಾಥ ಕೆ.ಎಚ್., ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮಹಾಲಿಂಗ ಐಗಳಿ, ಧಾರವಾಡ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟ್ಕರ್, ಹರೀಶ ಪೂಜಾರಿ, ಸೋಮೇಶ್ವರ ನಾಯ್ಕ, ಶ್ರೀಪಾದ ಭಟ್ಟ, ಬಾಬು ಬಾಂದೇಕರ್, ಸಿದ್ದಾರ್ಥ ನಂದೊಳ್ಳಿಮಠ, ಕಿರಣ ಚೌಹಾಣ ಇತರರಿದ್ದರು.
ಸಾಂತ್ವನ: ಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಬನ್ಸೋಡೆ ಮನೆಗೆ ಪ್ರಮೋದ ಮುತಾಲಿಕ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಇಂತಹ ಅಮಾನವೀಯ ಕೃತ್ಯ ನಡೆಯಬಾರದಿತ್ತು. ದುಃಖದಲ್ಲಿರುವ ಕುಟುಂಬಕ್ಕೆ ಹಿಂದೂ ಸಂಘಟನೆಗಳು ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಧೈರ್ಯ ಹೇಳಿದರು.