ಕಳ್ಳಿಯಿಂದ ಪೊಲೀಸರು ಚಿನ್ನದ ಸರಗಳನ್ನು ವಶಕ್ಕೆ ಪಡೆದರು.
- ಬೆಂಗಳೂರು ಮೂಲದ ಕಳ್ಳಿ
- ಬಸ್ ನಲ್ಲಿ ಓಡಾಡುವ ಪ್ರಯಾಣಿಸುವವರ ಚಿನ್ನ ಎಗರಿಸುವುದೇ ಆಕೆಯ ಕಾಯಕ
- ಗುರುವಾರ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ
ಶಿರಸಿ: ಮಹಿಳೆಯ ಬ್ಯಾಗಿನಲ್ಲಿದ್ದ ಬಂಗಾರದ ಆಭರಣಗಳನ್ನು ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಮಹಿಳಾ ಆರೋಪಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ರಾರಾಜಿನಗರದ 66ನೇ ಕ್ರಾಸ್, 05 ನೇ ಬ್ಲಾಕ್, 66ನೇ ಕ್ರಾಸ್, 05 ನೇ ಬ್ಲಾಕ್‌ನ ಜ್ಯೋತಿ (ಸಂಜನಾ) ವೆಂಕಟೇಶ ಪಸುಪುಲೇಟ್ (32) ಬಂಧಿತ ಆರೋಪಿಯಾಗಿದ್ದಾಳೆ.
ಬುಧವಾರ ಯಲ್ಲಾಪುರದ ಅಡಿಕೆಸರ ಗ್ರಾಮದಿಂದ ತನ್ನ ಊರಾದ ಚಂದ್ರಗುತ್ತಿಗೆ ಹೋಗಲು ಆಗಮಿಸಿದ್ದ ಸವಿತಾ ನಾಯ್ಕ ಎಂಬವರ ಬ್ಯಾಗಿನಲ್ಲಿದ್ದ ಆಭರಣಗಳನ್ನು ಈಕೆ ಎಗರಿಸಿದ್ದಳು. ಜನಜಂಗುಳಿಯಲ್ಲಿ ವ್ಯಾನೆಟಿ ಬ್ಯಾಗ್ ನ ಜಿಪ್ ತೆಗೆದು ಸ್ಟೀಲ್ ಬಾಕ್ಸಿನಲ್ಲಿ ಇಟ್ಟಿದ್ದ 1 ಲಕ್ಷ ರೂ. ಮೌಲ್ಯದ ಅಂದಾಜು 20 ಗ್ರಾಂ ಲವಂಗದ ಚಿನ್ನದ ಸರ, 50 ಸಾವಿರ ಮೌಲ್ಯದ ಅಂದಾಜು 10 ಗ್ರಾಂ ತೂಕದ ಚಿನ್ನದ ಕಿವಿಯ ಬೆಂಡೋಲೆ, ಸರಪಳಿ, ಮಾಟ, ಕೀ ಪ್ಯಾಡ್ ಮೊಬೈಲ್, 8 ಸಾವಿರ ರೂ. ನಗದು ಸೇರಿದಂತೆ ಒಟ್ಟೂ 1,59 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ್ದಳು. ಆಭರಣ ಕಳೆದುಕೊಂಡ ಮಹಿಳೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಕೊಂಡು ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಗುರುವಾರ ಆರೋಪಿತಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿತ ಮಹಿಳೆಯಿಂದ 2 ಪ್ರತ್ಯೇಕ ಪ್ರಕರಣಗಳಲ್ಲಿ 9 ಲಕ್ಷ ರೂ. ರೂ ಮೌಲ್ಯದ 70 ಗ್ರಾಂ ಬಂಗಾರದ ಆಭರಣಗಳನ್ನು ಜಫ್ತುಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ.ಜಿ, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್ ಈ.ಸಿ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆ ಪಿಎಸ್‌ಐ ನರಸಿಂಹಲು, ತನಿಖಾ ಪಿಎಸ್‌ಐ ನಾರಾಯಣ ರಾಥೋಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ಚನ್ನಬಸಪ್ಪ .ಕೆ, ರಾಜು.ಎಮ್, ಸುನೀಲ್, ಪ್ರಶಾಂತ, ಶಂಕರಮ್ಮ, ದೀಪಾ ಹಾಗೂ ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ ಕದಂ ಭಾಗವಹಿಸಿದ್ದರು.