ಸಂಜೀವನಿ ಸೇವಾ ಟ್ರಸ್ಟ್‌ನಿಂದ ಜೊಯಿಡಾದಲ್ಲಿ 8ನೇ ಆವೃತ್ತಿಯ (Bird World)ಪಕ್ಷಿವೀಕ್ಷಣೆ ನಡೆಯಿತು. ದಿನೇಶ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.  
ಉತ್ತರ ಕನ್ನಡ

ಪಕ್ಷಿಲೋಕ ವಿಸ್ಮಯ ಕಂಡು ಬೆರಗಾದರು... bird world

ಪ್ರಮುಖ ಮುಖ್ಯಾಂಶಗಳು

  • ಸಂಜೀವನಿ ಸೇವಾ ಟ್ರಸ್ಟ್‌ನಿಂದ ಪಕ್ಷಿ ವೀಕ್ಷಣೆ ಆಯೋಜನೆ
  • ಖಗಸಂತತಿಯ ಮಾಹಿತಿ ಪಡೆದುಕೊಂಡ ವಿದ್ಯಾರ್ಥಿಗಳು
  • ಪರೂಪದ ಹಕ್ಕಿಗಳನ್ನು ಕಂಡು ಸಂಭ್ರಮ
ಜೊಯಿಡಾ: ನಾವು ಎಷ್ಟೋ ಪಕ್ಷಿಗಳನ್ನು ಕಂಡಿರುತ್ತೇವೆ. ಅದರ ಹೆಸರು, ವಿಶೇಷತೆ ಇತ್ಯಾದಿಗಳ ಬಗ್ಗೆ ನಮಗೆ ಮಾಹಿತಿಯೇ ಇರುವುದಿಲ್ಲ.
(Bird World) ಈ ಕಾರಣಕ್ಕಾಗಿ ನೂರಾರು ಪಕ್ಷಿಗಳನ್ನು ಕಣ್ತುಂಬಿಕೊಳ್ಳುವ ಹಾಗೂ ಅದರ ಬಗ್ಗೆ ಮಾಹಿತಿ ಪಡೆಯುವ ಪಕ್ಷಿ ವೀಕ್ಷಣೆ ಕಾರ್ಯಕ್ರಮವನ್ನು ಸಂಜೀವನಿ ಸೇವಾ ಟ್ರಸ್ಟ್ ಭಾನುವಾರ ಆಯೋಜಿಸಿತ್ತು.
8ನೇ ಆವೃತ್ತಿಯ ಪಕ್ಷಿವೀಕ್ಷಣೆಯಲ್ಲಿ ಸ್ಥಳೀಯ ಮೊರಾರ್ಜಿ ದೇಸಾಯಿ, ಬಿಜಿವಿಎಸ್ ಕಾಲೇಜಿನ ವಿದ್ಯಾರ್ಥಿಗಳು, ಮಹಾರಾಷ್ಟ್ರದ ಪೂಣಾ. ಗೋವಾ, ಹುಬ್ಬಳ್ಳಿ, ಧಾರವಾಡದಿಂದ ಆಗಮಿಸಿದ್ದ ಪಕ್ಷಿಪ್ರೇಮಿಗಳು ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕೈಗಾ ಬರ್ಡರ್ಸ್ ತಂಡವು ಪಕ್ಷಿಗಳ ತೋರಿಸಿ ಅದರ ವಿಶೇಷತೆಯನ್ನು ವಿವರಿಸಿತು.
ವೀಕ್ಷಣೆಯ ವೇಳೆ ಕರ್ನಾಟಕದ ರಾಜ್ಯ ಪಕ್ಷಿ ಎನಿಸಿಕೊಂಡಿರುವ ನೀಲಕಂಠ, ಚಂದ್ರಮುಖಟ, ಬ್ಲಾಕ್ ಡ್ರೊಂಗೊ, ಕೋಗಿಲೆ, ಗುಬ್ಬಿ, ಗಿಡುಗ, ಮೈನ, ಗಿಳಿ, ಏಷಿಯನ್ ಗ್ರೀನ್ ಬೀ ಇಟರ್, ರೆಟ್ ವೆಂಟೆಡ್ ಬುಲ್‌ಬುಲ್, ಲಾಫಿಂಗ್ ಡೋವ್, ರೋಸ್ ರಿಂಗಡ್ ಪಾರ್ಕೇಟ್, ಕಿಂಗ್‌ಫಿಶರ್‌ದಂತಹ ನೂರಾರು ಬಗೆಯ ಅಪರೂಪದ ಪಕ್ಷಿಗಳು ಕಾಣಸಿಕ್ಕವು.
ದಿನೇಶ ಗಾಂವಕರ ಮಾತನಾಡಿ, ಪಶ್ಚಿಮ ಘಟ್ಟ ಸಮೃದ್ಧವಾಗಿರುವುದೇ ಪ್ರಾಣಿ ಪಕ್ಷಿ ಸಂಕುಲಗಳಿಂದ. ನಾವು ನಿಜವಾಗಿಯೂ ಹೇಗೆ ಬದುಕಬೇಕು ಎನ್ನುವುದನ್ನು ಅವು ನಮಗೆ ಕಲಿಸುತ್ತವೆ. ಪಕ್ಷಿಗಳ ಮೇಲೆ ನಾವು ವಿಶೇಷ ಪ್ರೀತಿಯನ್ನು ತೋರಬೇಕಿದೆ.
ರವಿ ರೇಡ್ಕರ್ ಮಾತನಾಡಿ, ಅರಣ್ಯ ಉಳಿಸುವಲ್ಲಿ ಪ್ರಾಣಿ ಪಕ್ಷಿಗಳು ತೋರುತ್ತಿರುವ ಕಾಳಜಿ ಮನುಷ್ಯನಲ್ಲಿ ಇಲ್ಲ ಎನ್ನುವುದಕ್ಕೆ ಖೇದವೆನಿಸುತ್ತದೆ.
ಅರಣ್ಯದಲ್ಲಿರುವ ಲಕ್ಷಾಂತರ ಜೀವಜಂತುಗಳು ಕಾಡಿನಿಂದ ಪಡೆದು ಕಾಡಿಗಾಗಿ ಏನಾದರೊಂದನ್ನು ಮರಳಿ ನೀಡುತ್ತವೆ.
ಮನುಷ್ಯ ಕಾಡಿನಿಂದ ಸಾಕಷ್ಟು ಪಡೆದು ಅದನ್ನು ಹಾಳು ಮಾಡುತ್ತಿರುವುದು ಬಿಟ್ಟರೆ ಏನೂ ಮಾಡುತ್ತಿಲ್ಲ. ಎಷ್ಟು ಬೇಕು ಅಷ್ಟೇ ಬದುಕಾಗಬೇಕು ವಿನಃ ಲೋಭ ಸರಿಯಲ್ಲ. ಪಕ್ಷಿ-ಪ್ರಾಣಿಗಳನ್ನು ಉಳಿಸುವುದು ನಮ್ಮ ಕಡ್ಡಾಯ ಕರ್ತವ್ಯ ಆಗಬೇಕು ಎಂದರು.
ಹರೀಶ, ಸಂತೋಷ ಇನಾಂದಾರ, ಸುನಿಲ ದೇಸಾಯಿ, ಜಯಂತ ಡೇರೆಕರ, ಆದಿತ್ಯ ರೇಡ್ಕರ್, ಗಿರೀಶ ಪಾಟೀಲ ಇತರರು ಪಕ್ಷಿ ವೀಕ್ಷಕರಿಗೆ ಮಾರ್ಗದರ್ಶನ ಮಾಡಿದರು.