ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಡಾ. ಜಿ.ವಿ.ಜೋಶಿ ಅವರ ಮೂರು ಪುಸ್ತಕಗಳನ್ನು (Development)ಲೋಕಾರ್ಪಣೆಗೊಳಿಸಲಾಯಿತು. ಜಿ.ಯು.ಭಟ್, ಮುರುಳಿಧರ ಪ್ರಭು, ಡಾ. ಡಿ.ಎಲ್.ಹೆಬ್ಬಾರ, ಪ್ರೊ. ಶಂಭು ಭಟ್ ಇತರರಿದ್ದರು.
- ಪತ್ರಕರ್ತ ಜಿ.ಯು. ಭಟ್ ಅಭಿಪ್ರಾಯ
- ಡಾ. ಜಿ.ವಿ. ಜೋಶಿ ಅವರ ಮೂರು ಪುಸ್ತಕ ಬಿಡುಗಡೆ
- ಕಡತೋಕಾದ ಜನತಾ ವಿದ್ಯಾಲಯದಲ್ಲಿ ಕಾರ್ಯಕ್ರಮ
ಹೊನ್ನಾವರ: ಹಿರಿಯ ಲೇಖಕ ಡಾ. ಜಿ.ವಿ. ಜೋಶಿ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಕಡತೋಕಾದ ಜನತಾ ವಿದ್ಯಾಲಯದ ದಿ. ಶಿವರಾಮ ಶಾಸಿ ಸ್ಮಾರಕ ಸಭಾಭವನದಲ್ಲಿ ಬುಧವಾರ ಜರುಗಿತು.
‘ಉತ್ತರವಿಲ್ಲದ ಉತ್ತರ ಕನ್ನಡ ಜಿಲ್ಲೆ’ ಪುಸ್ತಕವನ್ನು ಪತ್ರಕರ್ತ ಜಿ.ಯು. ಭಟ್ ಬಿಡುಗಡೆಗೊಳಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಇಂದಿಗೂ (development) ಅಭಿವೃದ್ಧಿಯತ್ತ ಸಾಗದೆ, ತನ್ನ ಸಮಸ್ಯೆಗಳಿಗೆ ‘ಉತ್ತರ’ ಕಂಡುಕೊಳ್ಳದ ಜಿಲ್ಲೆಯಾಗಿಯೇ ಉಳಿದುಹೋಗಿದೆ.
ಅಭಿವೃದ್ಧಿ ಮಾಡುತ್ತೇವೆ ಎಂದು ಬಂದ ಪ್ರಾಮಾಣಿಕರನ್ನು ಚುನಾವಣೆಯಲ್ಲಿ ಸೋಲಿಸಿದ್ದೇವೆ. ಹೀಗಾಗಿ ಜಿಲ್ಲೆಯಲ್ಲಿ ದಶಕಗಳಿಂದಲೂ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ.
ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಕನಿಷ್ಠ ಪ್ರಯತ್ನವನ್ನೂ ನಮ್ಮ ಜಿಲ್ಲೆಯ ನಾಯಕರು ಮಾಡಿಲ್ಲ. ಪರಿಣಾಮವಾಗಿ, ಇಂದಿಗೂ ಉನ್ನತ ಶಿಕ್ಷಣಕ್ಕಾಗಿ ಯುವಜನತೆ ಪಕ್ಕದ ಜಿಲ್ಲೆಗಳನ್ನು ಅವಲಂಬಿಸುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
‘ಅರ್ಥಶಾಸ್ತ್ರದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗಾಗಿ ಒಂದು ಶೋಧ’ ಪುಸ್ತಕವನ್ನು ಉದ್ಯಮಿ ಮುರುಳಿಧರ ಪ್ರಭು ಲೋಕಾರ್ಪಣೆ ಮಾಡಿ ಮಾತನಾಡಿ, ಚಾಣಾಕ್ಯನ ಅರ್ಥಶಾಸ ಇಂದಿಗೂ ಪ್ರಸ್ತುತವಾಗಿದೆ. ಆರ್ಥಿಕತೆ ಒಬ್ಬರಲ್ಲೇ ಕ್ರೋಢೀಕರಣಗೊಂಡರೆ ದೇಶಕ್ಕೆ ಸಮಸ್ಯೆ ಉಂಟಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವುದು ನಮ್ಮ ನೆಲದ ಗುಣ ಎಂದರು.
‘ಸೈದ್ಧಾಂತಿಕ ಮತ್ತು ವಲಯ ಆಧಾರಿತ ಅರ್ಥಶಾಸ’ ಪುಸ್ತಕವನ್ನು ನಿವೃತ್ತ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ ಬಿಡುಗಡೆಗೊಳಿಸಿ ಮಾತನಾಡಿ, ಕೃಷಿ, ಹಣಕಾಸು ಹಾಗೂ ಗ್ರಾಮೀಣಾಭಿವೃದ್ಧಿಯ ಹಲವು ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ ಎಂದರು.
ಸಂಗೀತ ವಿದ್ವಾಂಸ ಪ್ರೊ. ಶಂಭು ಭಟ್ ಅಧ್ಯಕ್ಷತೆ ವಹಿಸಿದ್ದರು.
ಲೇಖಕ ಡಾ. ಜಿ.ವಿ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಕೀಲ ಅಮಿತಾ ಭಾಗವತ್, ಕೊಂಕೇರಿ ಪ್ರತಿನಿಧಿ ಅನಸೂಯಾ ಭಟ್, ಅರ್ಥಧಾರಿ ಜಿ.ವಿ. ಹೆಗಡೆ, ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎಸ್.ಜಿ. ಹೆಗಡೆ, ಬರಹಗಾರ ಶಂಕರ ನಾರಾಯಣ ಭಟ್ ಉಪಸ್ಥಿತರಿದ್ದರು.
ಪ್ರಾಚಾರ್ಯೆ ದುರ್ಗಮ್ಮ ಪಿ.ಎಚ್. ಸ್ವಾಗತಿಸಿದರು. ಮುಖ್ಯ ಶಿಕ್ಷಕ ಡಿ.ಎನ್. ವೈದ್ಯ ವಂದಿಸಿದರು. ಶಿಕ್ಷಕ ಪ್ರದೀಪ ಖರ್ವಾ ನಿರ್ವಹಿಸಿದರು.