ಗೋಕರ್ಣದ ಶ್ರೀಮಹಾಬಲೇಶ್ವರ ಮಂದಿರದಲ್ಲಿ ನಡೆಯುತ್ತಿರುವ ಚತುರ್ವೇದ ಸ್ವಾಹಾಕಾರ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಹೆಗಡೆ ಅವರು ಕನ್ನಡದಲ್ಲಿ ಮುದ್ರಿಸಿದ ಚರಣಯುಕ್ತ ಸಂಹಿತಾ ಗ್ರಂಥವನ್ನು ಕ್ಷೇತ್ರದ ವೇದವಿದ್ವಾಂಸರು ಬಿಡುಗಡೆ ಮಾಡಿದರು. ವೇ. ವಿಶ್ವೇಶ್ವರ ಅಡಿ, ಡಾ. ಮಂಜುನಾಥ ಹೆಗಡೆ, ವೇ. ಗಣಪತಿ ಶಿವರಾಮ ಹಿರೇ. ವೇ. ಗಣಪತಿ ಗಜಾನನ ಹಿರೇ, ವೇ. ಕೃಷ್ಣ ಜೋಗಭಟ್ಟ, ವೇ. ಉದಯ ಮಯ್ಯರ್, ವೇ. ಗಣೇಶ ಜೋಶಿ ಮತಿತರರಿದ್ದರು. 
ಉತ್ತರ ಕನ್ನಡ

ವೇದಗಳು ಜ್ಞಾನಮಯ ಪ್ರಭೆ ಪ್ರಜ್ವಲಿತ ದೀಪಗಳು

ಗೋಕರ್ಣ: ವೇದಗಳಲ್ಲಿರುವ ಪ್ರತಿ ಅಕ್ಷರವೂ ಜ್ಞಾನದ ಪ್ರಭೆಯನ್ನು ಪ್ರಜ್ವಲಿಸುವ ದೀಪಗಳಾಗಿವೆ. ಇದೇ ಹಿನ್ನೆಲೆಯಲ್ಲಿ ವೇದವನ್ನು ‘ಪ್ರಜ್ವಲಿತೋ ಜ್ಞಾನಮಯ ಪ್ರದೀಪಃ’ ಎಂದು ಶ್ಲಾಘಿಸಲಾಗಿದೆ ಎಂದು ಶ್ರೀ ಮಹಾಬಲೇಶ್ವರ ಮಂದಿರದ ಪ್ರಧಾನ ಅರ್ಚಕ ವೇ. ಗಣಪತಿ ಗಜಾನನ ಹಿರೇ ಹೇಳಿದರು.
ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಎಸ್‌ಐ) ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಸುಬ್ರಾಯ ಹೆಗಡೆ ಉಂಚಗಿ ಅವರು ಕನ್ನಡದಲ್ಲಿ ಮುದ್ರಿಸಿದ ಅಪರೂಪದ ಚರಣಯುಕ್ತ ಸಂಹಿತಾ ಗ್ರಂಥದ ಸಮರ್ಪಣೆಯಲ್ಲಿ ಆಶೀರ್ವಾದ ಪೂರ್ವಕವಾಗಿ ಅವರು ಮಾತನಾಡಿದರು.
ಸ್ವಯಂ ಪ್ರಕಾಶಿನಿಯಾದ ವೇದಗಳ ಅಧ್ಯಯನ ಸೃಷ್ಟಿಯ ಕಣಕಣದಲ್ಲಿ ಜ್ಞಾನದ ಬೆಳಕಿಗೆ ಕಾರಣವಾಗುತ್ತದೆ. ಇಂತಹ ಜ್ಞಾನದೀಪದ ಬೀಜಗಳನ್ನು ಕನ್ನಡದಲ್ಲಿ ಬಿತ್ತುವ ಅಪರೂಪದ ಪ್ರಯತ್ನದ ಮೂಲಕ ಡಾ. ಹೆಗಡೆ ಅವರು ಕನ್ನಡ ಲಿಪಿಯಲ್ಲಿ ವೇದಾಧ್ಯಯನ ಅಪೇಕ್ಷಿಸುವ ವೇದಾಭಿಮಾನಿಗಳಿಗೆ ಹೊಸ ಕ್ಷಿತಿಜದ ತೆರವಿಗೆ ಕಾರಣರಾಗಿದ್ದಾರೆ. ಸ್ವತಃ ರಾಸಾಯನ ಶಾಸ್ತ್ರದ ಅಧ್ಯಯನಿಗಳಾದ ಡಾ. ಹೆಗಡೆ ಅವರು ಕಾನ್ಪುರದ ಐಐಟಿ ಮೂಲಕ ಡಾಕ್ಟರೇಟ್ ಪಡೆದು ನಿವೃತ್ತಿಯ ತರುವಾಯ ಅಖಂಡ 12 ವರ್ಷ ಇಲ್ಲಿನ ವೇದ ವಿದ್ವಾಂಸ ವೇ. ಗಣಪತಿ ಶಿವರಾಮ ಹಿರೇ ಅವರಿಂದ ಸಂಪೂರ್ಣ ಋಗ್ವೇದ ಶಿಕ್ಷಣ ಸಂಪನ್ನರಾದ ಅಪರೂಪದ ಜ್ಞಾನವಿದರಾಗಿದ್ದಾರೆ. ಕನ್ನಡದಲ್ಲಿ ಋಗ್ವೇದ ಸಂಹಿತಾ ಗ್ರಂಥಕ್ಕೆ ಅವರು ನೀಡಿರುವ ಈ ಕೊಡುಗೆ ಅಜರಾಮರವಾಗಿ ಉಳಿಯಲಿದೆ ಎಂದು ಕ್ಷೇತ್ರದ ಸಮಸ್ತ ವೇದವಿದರ ಪರವಾಗಿ ಅವರು ಆಶೀರ್ವಾದವನ್ನಿತ್ತಿರು.
ಶ್ರೀ ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ವೇ. ಉದಯ ಮಯ್ಯರ್ ಡಾ. ಹೆಗಡೆ ಅವರ ವಿಜ್ಞಾನ ಮತ್ತು ವೇದಜ್ಞಾನ ವಿಶೇಷತೆ ಮತ್ತು ವೇದಾಂಗಕ್ಕೆ ಅವರ ಕೊಡಗೆಯನ್ನು ಸಂಕ್ಷಿಪ್ತದಲ್ಲಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಹಾಬಲೇಶ್ವರ ಮಂದಿರದ ಹಿರಿಯ ಅರ್ಚಕ ವೇ. ವಿಶ್ವೇಶ್ವರ ಅಡಿ ದಂಪತಿ, ವೇ. ಗಣಪತಿ ಶಿವರಾಮ ಹಿರೇ, ವೇ. ಕೃಷ್ಣ ಜೋಗಭಟ್ಟ, ವೇ. ಚಂದ್ರಶೇಖರ ಅಡಿ, ವೇ. ಗಜಾನನ ರಾಮ ಉಪಾಧ್ಯ, ವೇ. ವಿಶ್ವನಾಥ ಪ್ರಸಾದ ರಮಣಿ, ವೇ. ನಾಗರಾಜ ಜೋಶಿ, ವೇ. ಕೃಷ್ಣ ಐತಾಳ ಮತ್ತು ಕ್ಷೇತ್ರದ ಹಿರಿಯ ಮತ್ತು ಯುವ ವೈದಿಕರು ಉಪಸ್ಥಿತರಿದ್ದರು. ವೇ. ಗಣೇಶ ಜೋಶಿ, ವೇ. ಶ್ರೀನಾಗ ಶೇಷ ಅಡಿ ಹಾಗೂ ಶ್ರೀ ಹರಿಹರೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಗಳು ನಿರ್ವಹಿಸಿದರು.
ಫೋಟೋ 28ಜಿಕೆಎನ್1-