ಶಿರಸಿಯಲ್ಲಿ ಹವ್ಯಕ ಮಹಾಸಭಾದ ಸಂಸ್ಕಾರೋತ್ಸವದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು.  
ಉತ್ತರ ಕನ್ನಡ

ಸಂಸ್ಕಾರಗಳೇ ವ್ಯಕ್ತಿಯ ನಿಜವಾದ ಸೌಂದರ್ಯ true beauty

ಶಿರಸಿ: ಸಂಸ್ಕಾರಗಳೇ ನಿಜವಾದ ಸೌಂದರ್ಯ. (true beauty) ಒಬ್ಬ ವ್ಯಕ್ತಿಯಲ್ಲಿ ಸಂಸ್ಕಾರಗಳು ನೆಲೆಗೊಂಡರೆ ಬದುಕಿನ ಉದ್ದಕ್ಕೂ ಆ ವ್ಯಕ್ತಿಯ ಬಗ್ಗೆ ಆದರದ ಭಾವ ಬರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.
ನಗರದ ಕಡವೆ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾ ಸಭಾ ಸಂಸ್ಥೆಯು ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ, ಹವ್ಯಕ ವೈದಿಕ ಸಂಘಟನೆ ಭಾನುವಾರ ಹಮ್ಮಿಕೊಂಡ ಸಂಸ್ಕಾರೋತ್ಸವದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರಗಳು ಮೊದಲು ಮನೆಯಿಂದಲೇ ಆಗಬೇಕು. ಹವ್ಯಕ ಸಮಾಜ ಉಳಿಯಲು ಆರು ಅಂಶ ಮುಖ್ಯ. ದೇವರ ಪೂಜೆ, ಸ್ತೋತ್ರ ಪಠಣ, ಸಂಧ್ಯಾವಂದನೆ, ಯೋಗಾಸಾನ, ಪ್ರಾಣಾಯಾಮ ಮಾಡಬೇಕು. ಇವುಗಳನ್ನು ಅಳವಡಿಸಿಕೊಂಡರೆ ಮನೆಯ ವಾತಾವರಣವೇ ಬದಲಾಗುತ್ತದೆ ಎಂದರು.
ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಸಂಸ್ಕಾರ ಮಾಡಬೇಕು. ವಿವಾಹ ವಿಳಂಬವಾದರೆ ಸಮಸ್ಯೆ ಹೆಚ್ಚಾಗುತ್ತದೆ. ಕನಿಷ್ಠ ಮೂರು ಮಕ್ಕಳ ಮೂಲಕ ಸತ್ಪ್ರಜೆ ಕೊಡಬೇಕು.
ಸಂಸ್ಕಾರ ಹಾಗೂ ಸಂಖ್ಯೆ ಹವ್ಯಕ, ಬ್ರಾಹ್ಮಣ ಸಮಾಜಕ್ಕೆ ಬಲವಾಗುತ್ತದೆ. ಬ್ರಾಹ್ಮಣ ಸಮಾಜವನ್ನು ಇತರರು ಅನುಸರಿಸುವರು. ಈ ಕಾರಣದಿಂದ ಮೊದಲು ಬ್ರಾಹ್ಮಣರು ಸರಿದಾರಿಯಲ್ಲಿ ನಡೆಯಬೇಕು ಎಂದರು.
ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮೀಜಿ, ಮನುಷ್ಯನ ಆಂತರ್ಯದ ಗುರುತೇ ಸಂಸ್ಕಾರ. ಮಾಡುವ ಚಿಂತನೆ, ಕಾರ್ಯ ಅನುಭವ ಗುರುತೇ ಅಭ್ಯಾಸವಾಗಿ, ಸ್ವಭಾವ ಆಗುತ್ತದೆ. ಸ್ವಭಾವ ಗುರುತಾಗುತ್ತದೆ. ಅಂಥ ಸಂಸ್ಕಾರವನ್ನು ಸರಿಯಾಗಿ ರೂಢಿಸಿಕೊಳ್ಳಬೇಕು ಎಂದರು.
ಸ್ವರ್ಣವಲ್ಲೀ ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಸಂಸ್ಕಾರದ ಆಳಕ್ಕೆ ಹೋದಂತೆ ವ್ಯಕ್ತಿ ಅಷ್ಟೇ ಉನ್ನತಕ್ಕೆ ಹೋಗುತ್ತಾನೆ. ಮಕ್ಕಳಿಗೆ ಕಾಲಕಾಲಕ್ಕೆ ಸಂಸ್ಕಾರ ಕೊಡಬೇಕು. ಆಗ ನಮ್ಮತನ ಇನ್ನಷ್ಟು ಪ್ರಜ್ಚಲಿಸುತ್ತದೆ ಎಂದರು.
ಪತ್ರಕರ್ತ ರವಿ ಹೆಗಡೆ, ಈ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಸಂಸ್ಕಾರ ಎಂಬುದು ಹೊಸತಲ್ಲ. ಆದರೆ, ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆ ಆಳವಾದ ಚಿಂತನೆ ಬೇಕಾಗಿದೆ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಮ್ಮ ಮುಂದೆ ಸವಾಲುಗಳು ಬಹಳ ದೊಡ್ಡದಿದೆ. ನಮ್ಮ ಸಂಸ್ಕಾರ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕು.
ಹಿರಿಯರ ದಾರಿಯಲ್ಲಿ ಮುಂದಿನ ಪೀಳಿಗೆಯು ನಡೆಯುವಂತೆ ಆಗಬೇಕು ಎಂದರು. ಸನ್ಮಾನಿತರ ಪರವಾಗಿ ಗಣಪತಿ ಭಟ್ಟ ಕಿಬ್ಬಳ್ಳಿ ಮಾತನಾಡಿದರು.
ವೇದಿಕೆಯಲ್ಲಿ ಮಹಾ ಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ಆರ್.ಎಂ. ಹೆಗಡೆ ಬಾಳೇಸರ, ಡಿ.ಪಿ. ಹೆಗಡೆ. ಪ್ರಶಾಂತ ಭಟ್ಟ ಇತರರಿದ್ದರು. ಇದಕ್ಕೂ ಮುನ್ನ ಸುಧಾ ಶರ್ಮ ಚವತ್ತಿ, ರಾಮಕೃಷ್ಣ ಭಟ್ಟ, ವಿ.ಉಮಾಕಾಂತ ಭಟ್ಟ ಕೆರೇಕೈ, ನೀರ್ಗಾನ್ ವಿಶ್ವನಾಥ ಭಟ್ಟ, ಡಾ.ಆರತಿ ವಿ.ಬಿ. ಅವರಿಂದ ವಿವಿಧ ಮಹತ್ವದ ಗೋಷ್ಠಿ ನಡೆದವು.
ತುಳಸಿ ಹೆಗಡೆ ತಂಡದಿಂದ ಯಕ್ಷ ರೂಪಕ, ತೋಟಿಮನೆ ಗಣಪತಿ ಹೆಗಡೆ ಸಂಗಡಿಗರಿಂದ ಯಕ್ಷ ನೃತ್ಯ ಸಿಂಚನ, ಶಿಕ್ಷಕಿಯರಿಂದ ಜಾನಪದ ನೃತ್ಯ ನಡೆಯಿತು.

ಸಾಧಕರಿಗೆ ಸನ್ಮಾನ

ವೇದಮೂರ್ತಿಗಳಾದ ಕಿಬ್ಬಳ್ಳಿ ಗಣಪತಿ ಭಟ್, ಸೂರ್ಯನಾರಾಯಣ ಭಟ್ ನೆಲೆಮಾವು, ನಾರಾಯಣ ಭಟ್ ಮೊಟ್ಟೆಗದ್ದೆ, ಮಂಜುನಾಥ ಭಟ್ಟ ಕಲ್ಲಾಳ, ರಾಮಕೃಷ್ಣ ಭಟ್ ಕೆಳಗಿನಪಾಲು, ತಿಮ್ಮಪ್ಪ ಭಟ್ಟ ಸಾರಂಗ, ಶಿಕ್ಷಕರಾದ ಕೆ.ವಿ.ಭಟ್ಟ, ಗೌರಿ ಹೆಗಡೆ ಹುತಗಾರ, ಸೀತಾ ಭಟ್, ನಾರಾಯಣ ಭಟ್ ಯಲ್ಲಾಪುರ, ಮಹಾಲಕ್ಷ್ಮಿ ಹೆಗಡೆ ಉಮ್ಮಚಗಿ, ಜನಾರ್ದನ ಹೆಗಡೆ ಜೋಯಿಡಾ, ಮಂಜುನಾಥ ಯಾಜಿ, ಮಾಯಾ ಭಟ್ಟ ಸಿದ್ದಾಪುರ, ಜಿ.ಆರ್. ಭಾಗವತ್ ತ್ಯಾರಗಲ್ ಅವರನ್ನು ಸನ್ಮಾನಿಸಲಾಯಿತು.