ಶಿರಸಿ ನಗರಕ್ಕೆ ಖಾಸಗಿ ಕಾರ್ಯಕ್ರಞದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಮಾಧ್ಯಮದೊಂದಿಗೆ ಸೋಮವಾರ ಮಾತನಾಡಿದರು.
- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
- ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಟೀಕೆ
- ರೈತರ ಸಂಕಷ್ಟಕ್ಕೆ ಸ್ಪಂದಿಸದ ಕೈ ಸರ್ಕಾರ
- ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ
ಶಿರಸಿ: ಉತ್ತರ ಕರ್ನಾಟಕದ ಸಮಸ್ಯೆಗಳ (The problem of North Karnataka) ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮೊದಲ ಮೂರು ಅಥವಾ ನಾಲ್ಕು ದಿನ ಚರ್ಚೆ ಮಾಡಲು ನಾವು ಮತ್ತು ಜೆಡಿಎಸ್ ಶಾಸಕರು ನಿರ್ಧರಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರಕ್ಕೆ ಖಾಸಗಿ ಕಾರ್ಯಕ್ರಞದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಮಾಧ್ಯಮದೊಂದಿಗೆ ಸೋಮವಾರ ಮಾತನಾಡಿದರು.
ಪ್ರತಿ ಬಾರಿ ಚಳಿಗಾಲದ ಅಧಿವೇಶನದಲ್ಲಿ ಕೊನೆಯ ದಿನ ಕಾಟಾಚಾರಕ್ಕೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇಲ್ಲಿಯ ಸಮಸ್ಯೆಗಳು ಹಾಗೆಯೇ ಉಳಿದುಕೊಳ್ಳುತ್ತಿವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ರೈತರ ಸಮಸ್ಯೆ, ಅಲ್ಲಿ ಆಗಬೇಕಿರುವ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಯೋಜನೆ ಸರಿಯಾದ ರೀತಿ ಅನುಷ್ಠಾನ ಮಾಡದಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ದೊಡ್ಡ ಷಡ್ಯಂತ್ರವಾಗಿದೆ. ಇಲ್ಲಿನ ಪ್ರೊಗ್ರೇಸ್ ರಿಪೋರ್ಟ್ ನೀಡದೇ ಕೇಂದ್ರದ ಅನುದಾನ ಬರುತ್ತಿಲ್ಲ ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಕೇಂದ್ರದ ಮೇಲೆ ಟೀಕೆ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಕಾದಾಟವಿದ್ದರೂ ಬಿಜೆಪಿ ಸರ್ಕಾರ ರಚನೆಯಲ್ಲಿ ಆಸಕ್ತಿ ಹೊಂದಿಲ್ಲ. ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ನೀಡಿದ್ದಾರೆ. ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕುಳ್ಳಿರಿಸಿದ್ದಾರೆ. ವಿರೋಧ ಪಕ್ಷವಾಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ ಹಾಗೂ ಮುಂದೆಯೂ ಮಾಡುತ್ತೇವೆ.
ಪ್ರತಿ ದಿನ ಮುಖ್ಯಮಂತ್ರಿ ಖುರ್ಚಿಗೆ ಪೈಪೋಟಿ ಹೆಚ್ಚುತ್ತಿದೆ. ನನ್ನ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಹಿರಿಯ ಸಚಿವರು, ಶಾಸಕರು ಸೇರಿ ಏಳೆಂಟು ಜನರು ಮುಖ್ಯಮಂತ್ರಿ ಆಗಲು ಪ್ರಯತ್ನ ನಡೆಸಿದ್ದಾರೆ. ಅದರ ಪರಿಣಾಮ ಆಡಳಿತ ಯಂತ್ರ ಕುಸಿದು ಬಿದ್ದಿದೆ. ಇದಲ್ಲದೆ, ಸಿದ್ಧರಾಮಯ್ಯ ರೈತರ ಬಗ್ಗೆಯೂ ಅಸಡ್ಡೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೈತ ಸಮ್ಮಾನ್ ಹಾಗೂ ಬಸವರಾಜ ಬೊಮ್ಮಾಯಿ ಅವರ ರೈತ ವಿದ್ಯಾಸಿರಿಯನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿ, ರೈತರ ಸಂಕಷ್ಟಕ್ಕೆ ಯಾವುದೇ ಸ್ಪಂದನೆ ಮಾಡುತ್ತಿಲ್ಲ. ಅತಿವೃಷ್ಟಿಯಲ್ಲೂ ಯಾರೂ ರೈತರ ಕಷ್ಟ ಕೇಳಲಿಲ್ಲ. ಮುಖ್ಯಮಂತ್ರಿ ಖುರ್ಚಿಯ ಕಾಳಗದಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂದರು.
ಜಲ ಸಂಪತ್ತು ಸಮರ್ಪಕ ಉಪಯೋಗ ಆಗಬೇಕು. ಆದರೆ ವೈಜ್ಞಾನಿಕ ವಿಚಾರ ಮಾಡಿ ಯೋಜನೆಗಳು ಬರಬೇಕು. ಅವೈಜ್ಞಾನಿಕವಾಗಿ ಯೋಜನೆ ಜಾರಿಗೆ ತಂದಲ್ಲಿ ಅದಕ್ಕೆ ನಮ್ಮ ವಿರೋಧವಿದೆ ಎಂದು ವರದಾ ಹಾಗೂ ಅಘನಾಶಿನಿ ನದಿ ಜೋಡಣೆ ಕುರಿತು ವೈಜ್ಞಾನಿಕವಾಗಿ ನೋಡಬೇಕಿದೆ ಎಂದರು. ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಅವರು ಸಭೆ ಮಾಡಿದ್ದಾರೆ, ಅವರು ಸಭೆ ಮಾಡಲು ಸ್ವತಂತ್ರರಿದ್ದಾರೆ. ಅದರ ಕುರಿತು ಟೀಕೆ ಮಾಡುವುದಿಲ್ಲ. ಆದರೆ, ನಮ್ಮದು ರಾಷ್ಟ್ರೀಯ ಪಕ್ಷವಿದೆ. ಯತ್ನಾಳ್ ಪಕ್ಷಕ್ಕೆ ಬರುವುದರ ಕುರಿತು ನನಗೆ ಮಾಹಿತಿಯಿಲ್ಲ ಎಂದರು.
ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಸಾಲೇರ, ಪಶ್ಚಿಮ ಭಾಗದ ಗ್ರಾಪಂ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ ಇತರರಿದ್ದರು.