ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯ ಸಮೀಪದ ಬಿ.ಕೆ. ಹಳ್ಳಿ ವ್ಯಾಪ್ತಿಯ ಪ್ರದೇಶದಲ್ಲಿರುವ ಕಲ್ಲು ಕ್ವಾರಿ.
ಹಳಿಯಾಳ: ಸಮೀಪದ ಬಿ.ಕೆ. ಹಳ್ಳಿ ವ್ಯಾಪ್ತಿಯ ಪ್ರದೇಶದಲ್ಲಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರಿ ಸ್ಫೋಟದ ಸದ್ದಿನ ಬಗ್ಗೆ ಉಂಟಾಗಿದ್ದ ಗೊಂದಲಗಳಿಗೆ ಮಂಗಳವಾರ ತೆರೆ ಬಿದ್ದಿದೆ.
ಸೋಮವಾರ ಸಂಜೆ 5ಗಂಟೆ ಸುಮಾರಿಗೆ ಭಾರಿ ಸ್ಫೋಟದ ಸದ್ದು ಹಳಿಯಾಳ ಪಟ್ಟಣದವರೆಗೂ ಕೇಳಿಸಿ, ಭಾರಿ ಗೊಂದಲಗಳಿಗೆ ಕಾರಣವಾಗಿತ್ತು. ಸ್ಫೋಟದ ಸದ್ದಿಗೆ ಹಲವರು ಭಯಭೀತರಾಗಿದ್ದರು. ವಿಷಯ ತಿಳಿದ ಹಳಿಯಾಳ ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಮತ್ತು ಪಿಎಸ್‌ಐ ಬಸವರಾಜ ಮಬನೂರ ಅವರು ಮಂಗಳವಾರ ಬೆಳಗ್ಗೆ ಧಾರವಾಡ ರಸ್ತೆಯ ಬಿ.ಕೆ. ಹಳ್ಳಿ ಗ್ರಾಮ ವ್ಯಾಪ್ತಿಗೆ ಬರುವ ಶಿವಾಜಿ ಬಂಡಿವಡ್ಡರ ಅವರಿಗೆ ಸೇರಿದ ಕಲ್ಲು ಕ್ವಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ವಾರಿಯ ಮಾಲೀಕರು ಎಲ್ಲ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ನಿಯಮದಂತೆ, ಸ್ಫೋಟಕ್ಕೆ ಸಂಬಂಧಿಸಿದಂತೆ ಪರಿಣತರನ್ನೇ ಕರೆಸಿ ಕಾರ್ಯಾಚರಣೆ ಮಾಡಲಾಗಿದೆ. ಪಾಲಿಸಬೇಕಾದ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ ಎಂದು ಸ್ಥಳದಲ್ಲಿದ್ದ ಕ್ವಾರಿ ನಡೆಸುತ್ತಿರುವ ಬಂಡಿವಡ್ಡರ ಕುಟುಂಬದ ಮಂಜುನಾಥ ಅವರು ತಿಳಿಸಿದರು.