ಆರ್ಥಿಕ ಸಮೀಕ್ಷೆಯ ಮಾಹಿತಿ  
ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ತಲಾ ಆದಾಯ 2,95,116 ರೂ.

ಕಾರವಾರ: ಇದೇ ಮಾರ್ಚ್ನಲ್ಲಿ ಬಿಡುಗಡೆಯಾದ ರಾಜ್ಯ ಆರ್ಥಿಕ ಸಮೀಕ್ಷೆ-2025-26 ರ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯ ತಲಾ ಆದಾಯದಲ್ಲಿ ಏರಿಕೆ ಕಂಡಿದೆ. ಆದರೆ, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆ ಎರಡು ಸ್ಥಾನ ಕುಸಿತ ಕಂಡಿದೆ.
ಕಳೆದ ಸಾಲಿನ ಎಂದರೆ 2024-25 ನೇ ಸಾಲಿನ ಆರ್ಥಿಕ ಬೆಳವಣಿಗೆಗಳನ್ನು ಆಧರಿಸಿ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಆರ್ಥಿಕ ಸಮೀಕ್ಷಾ ವರದಿಯನ್ನು ಸಿದ್ಧ ಮಾಡುತ್ತದೆ. ಅದರಂತೆ ರಾಜ್ಯದ ನಿವ್ವಳ(ಖರ್ಚು ತೆಗೆದು) ತಲಾ ಆದಾಯವು 3,86,156 ರೂ. ಇದೆ. ಉತ್ತರ ಕನ್ನಡ ಜಿಲ್ಲೆಯ ತಲಾ ಆದಾಯವು 2,95,116 ರೂ. ಇದೆ. ಉತ್ತರ ಕನ್ನಡವು ರಾಜ್ಯದಲ್ಲಿ 16 ನೇ ಸ್ಥಾನದಲ್ಲಿದೆ. ಈ ವರ್ಷದ ವರದಿಯಂತೆ ಬೆಂಗಳೂರು ನಗರ ತಲಾ ಆದಾಯದಲ್ಲಿ ರಾಜ್ಯದಲ್ಲಿ ನಂಬರ್ 1 ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ 2 ಹಾಗೂ ಉಡುಪಿ ಮೂರನೇ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ತಲಾ ಆದಾಯದಲ್ಲಿ ಕೊನೆಯಲ್ಲಿವೆ.

ಯಾವ ವರ್ಷ ಎಷ್ಟು..?

2023-24 ರಲ್ಲಿ ರಾಜ್ಯದ ನಿವ್ವಳ ತಲಾ ಆದಾಯವು 3,39,813 ರೂ. ಇತ್ತು. ಉತ್ತರ ಕನ್ನಡ ಜಿಲ್ಲೆಯ ತಲಾ ಆದಾಯವು 2,66,619 ರೂ. ಇತ್ತು. ಆದರೆ, ತಲಾ ಆದಾಯದ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಆಗ ರಾಜ್ಯದಲ್ಲಿ 14 ನೇ ಸ್ಥಾನದಲ್ಲಿತ್ತು. ಈಗ ಎರಡು ಸ್ಥಾನ ಇಳಿಕೆ ಕಂಡAತಾಗಿದೆ. 2022 ರಲ್ಲಿ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯ ವರದಿಯಂತೆ 2018 -19 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ತಲಾ ಆದಾಯ 1,55,582 ರೂ. ಇತ್ತು. 2015-16 ರಲ್ಲಿ ಜಿಲ್ಲೆಯ ತಲಾ ಆದಾಯ 96,066 ರೂ. ಇತ್ತು.

ಜಿಲ್ಲೆಯ ಆಂತರಿಕ ಆದಾಯ

ಈ ವರ್ಷದ ವರದಿಯಲ್ಲಿ ಜಿಲ್ಲೆಯ ನಿವ್ವಳ ಆಂತರಿಕೆ ಆದಾಯ 42,780 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಳೆದ ವರ್ಷದ ಜನಸಂಖ್ಯೆಯನ್ನು ಭಾಗಿಸಿ ತಲಾ ಆದಾಯವನ್ನು ಕಂಡು ಹಿಡಿಯಲಾಗುತ್ತದೆ. 2011 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಂತರಿಕ ಆದಾಯ ಪ್ರಮಾಣ 23,061 ಕೋಟಿ ರೂ. ಇತ್ತು.
ರಾಜ್ಯದ ಒಟ್ಟಾರೆ ಆಂತರಿಕ ಆದಾಯಕ್ಕೆ ಜಿಲ್ಲೆಯು ಶೇ.1.7 ರಷ್ಟು ಕೊಡುಗೆಯನ್ನು ನೀಡುತ್ತದೆ. ರಾಜ್ಯದ ಕೃಷಿ ವಲಯಕ್ಕೆ ಉಕ ಜಿಲ್ಲೆಯು ಶೇ. 2.5, ಕೈಗಾರಿಕಾ ವಲಯಕ್ಕೆ 1.7, ಹಾಗೂ ಸೇವಾ ವಲಯದಲ್ಲಿ 1.5 ರಷ್ಟು ಕೊಡುಗೆಯನ್ನು ನೀಡುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕಳೆದ ಸಾಲಿನಲ್ಲಿ ರಾಜ್ಯದ ಕೃಷಿ ವಲಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಶೇ.2.9 ರಷ್ಟಿತ್ತು. ಅದು, ಶೇಕಡ 0.4 ರಷ್ಟು ಇಳಿಕೆಯಾಗಿದೆ. ಇದರಿಂದ ತಲಾ ಆದಾಯದ ಪ್ರಮಾಣದಲ್ಲೂ ಜಿಲ್ಲೆ ಕೆಳಗಿಳಿದಿದೆ ಎಂದು ಅಂದಾಜಿಸಲಾಗಿದೆ.

ಹೇಗೆ ಲೆಕ್ಕಾಚಾರ..?

ಜಿಲ್ಲಾ ಅಂಕಿ ಸಂಖ್ಯೆಗಳ ಇಲಾಖೆ ಪ್ರತಿ ವರ್ಷ ಜಿಲ್ಲೆಯ ಒಟ್ಟಾರೆ ಕೃಷಿ, ಕೈಗಾರಿಕೆ, ಹಾಗೂ ಸೇವಾ ವಲಯಗಳ ಬೆಳವಣಿಗೆ ಹಾಗೂ ಅಂದಾಜನ್ನು ಸಂಗ್ರಹಿಸುತ್ತದೆ. ಬೆಲೆಗಳ ಕೊಡುಗೆಯನ್ನೂ ಲೆಕ್ಕ ಹಾಕುತ್ತದೆ. ಅದನ್ನು ಆಧರಿಸಿ ಜಿಲ್ಲಾವಾರ ಆಂತರಿಕ ನಿವ್ವಳ ಆದಾಯ ಹಾಗೂ ತಲಾ ಆದಾಯ ಲೆಕ್ಕ ಹಾಕಲಾಗುತ್ತದೆ.

ಅಕ್ಕಪಕ್ಕದ ಜಿಲ್ಲೆಗಳ ತಲಾ ಆದಾಯ

  • ಉಡುಪಿ-6.0 ಲಕ್ಷ ರೂ.
  • ದಕ್ಷಿಣ ಕನ್ನಡ 6.2 ಲಕ್ಷ ರೂ.
  • ಶಿವಮೊಗ್ಗ 3.8 ಲಕ್ಷ ರೂ.
  • ಹಾವೇರಿ 2 ಲಕ್ಷ ರೂ.
  • ಧಾರವಾಡ 3. ಲಕ್ಷ ರೂ.
........