ಗೋಕರ್ಣ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಗಣೇಶ ಪಂಡಿತ, ನಾಗರಾಜ ನಾಯಕ ತೊರ್ಕೆ, ಎಂ.ಜಿ. ಭಟ್ಟ, ವೆಂಕಟೇಶ ನಾಯಕ, ಆರತಿ ಗೌಡ, ವಿನಾಯಕ ಕೊಡ್ಲೆಕೆರೆ ಮತ್ತಿತರರಿದ್ದರು. 
ಉತ್ತರ ಕನ್ನಡ

ಪರಸ್ಪರ ವಿಶ್ವಾಸದಿಂದ ಪಕ್ಷ ಬಲಿಷ್ಠ

ಗೋಕರ್ಣ: ಪಕ್ಷದ ಕಾರ್ಯಕರ್ತರ ಮಧ್ಯೆ ವಿಶ್ವಾಸದ ಕೊರತೆ ಹೆಚ್ಚಾದರೆ ಅಂತಹ ರಾಜಕೀಯ ಪಕ್ಷ ಕ್ಷೀಣವಾಗುತ್ತದೆ. ಕಾರ್ಯಕರ್ತರ ನಡುವಿನ ಪರಸ್ಪರ ವಿಶ್ವಾಸದಿಂದ ಮಾತ್ರ ಪಕ್ಷ ಬಲಿಷ್ಠವಾಗುತ್ತದೆ. ಇದಕ್ಕೆ ವರ್ತಮಾನದಲ್ಲಿ ಬಿಜೆಪಿ ಜಾಗತಿಕ ಉದಾಹರಣೆಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಇಲ್ಲಿನ ಶ್ರೀ ಸದ್ಗುರು ಪ್ರಸಾದ ನಿಲಯ ಸಭಾಂಗಣದಲ್ಲಿ ಶುಕ್ರವಾರ ಸ್ಥಳೀಯ ಬಿಜೆಪಿ ಮಂಡಲ ಆಯೋಜಿಸಿದ್ದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿಶ್ವ ಸ್ಥರದಲ್ಲಿ 18 ಕೋಟಿ ಸದಸ್ಯರನ್ನು ಹೊಂದಿದ ಏಕಮೇವ ರಾಜಕೀಯ ಪಕ್ಷ ಬಿಜೆಪಿ ಆಗಿದೆ. ಇಂತಹ ವಿಶ್ವ ದಾಖಲೆಗೆ ಪಕ್ಷದ ವಿವಿಧ ಸ್ಥರದ ಚುನಾಯಿತ ಪ್ರತಿನಿಧಿಗಳು, ಹಿರಿಯ ನಾಯಕರು ಮತ್ತು ಕಾರ್ಯರ್ತರ ಮಧ್ಯದ ವಿಶ್ವಾಸವೇ ಸುಭದ್ರ ತಳಪಾಯ. ಕೇವಲ ಇಬ್ಬರು ಸಂಸದರಿಂದ ದೇಶ ಸೇವೆಯನ್ನು ಪ್ರಾರಂಭಿಸಿದ ಬಿಜೆಪಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 12 ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದಲ್ಲಿ ದೇಶವನ್ನು ಮುನ್ನಡೆಸುತ್ತಿರುವುದಕ್ಕೂ ಇದೇ ವಿಶ್ವಾಸ ಕಾರಣವಾಗಿದೆ ಎಂದರು.
ಪಕ್ಷದ ಕಾರ್ಯಕರ್ತರನ್ನು ಶಿಸ್ತುಬದ್ಧ ಮತ್ತು ನಿಷ್ಠಾವಂತರನ್ನಾಗಿ ರೂಪಿಸುವುದೇ ಈ ಬಗೆಯ ಪ್ರಶಿಕ್ಷಣ ಮಹಾಭಿಯಾನದ ಉದ್ದೇಶ ಮತ್ತು ಗುರಿಯಾಗಿದೆ. ಇಲ್ಲಿ ನೀಡಲಾಗುವ ಪ್ರಶಿಕ್ಷಣದ ಸದುಪಯೋಗ ಪಡೆದು ಪಕ್ಷ ಮತ್ತು ದೇಶದ ಬಲ ಸಂವರ್ಧನೆಗೆ ಮುಂದಾಗಬೇಕು ಎಂದರು.
ಪಕ್ಷದ ಜಿಲ್ಲಾ ಪ್ರಮುಖ ನಾಗರಾಜ ನಾಯಕ ತೊರ್ಕೆ, ಮಂಡಲ ಪ್ರಭಾರಿ ಆರತಿ ಗೌಡ, ರಾಜ್ಯ ಶಿಕ್ಷಣ ಪ್ರಕೋಷ್ಠ ಉಪಾಧ್ಯಕ್ಷ ಎಂ.ಜಿ. ಭಟ್ಟ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ರಾಜ್ಯ ವಾಣಿಜ್ಯ ಪ್ರಕೋಷ್ಠದ ಮಂಜುನಾಥ ಜನ್ನು, ಗ್ರಾಪಂ ಮಾಜಿ ಅಧ್ಯಕ್ಷ ಸಣ್ಣು ಗೌಡ, ಇಲ್ಲಿನ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿನಾಯಕ ಕೊಡ್ಲೆಕೆರೆ, ಮಿರ್ಜಾನ್ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಘವೇಂದ್ರ ನಾಯ್ಕ ವೇದಿಕೆಯಲ್ಲಿದ್ದರು.
ಸ್ಥಳೀಯ ಬಿಜೆಪಿ ಮಂಡಲಾಧ್ಯಕ್ಷ ಗಣೇಶ ಪಂಡಿತ ಸ್ವಾಗತಿಸಿದರು. ವಿನಾಯಕ ಕೊಡ್ಲೆಕೆರೆ ನಿರ್ವಹಿಸಿದರು. ಇಲ್ಲಿನ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಕಿಣಿ ವಂದಿಸಿದರು. ರಮೇಶ ಪ್ರಸಾದ, ಕುಮಾರ ಮಾರ್ಕಾಂಡೆ, ಜಗದೀಶ ಅಂಬಿಗ, ದಯಾನಂದ ನಾಯ್ಕ ಮತ್ತಿತರರು ಸಹಕರಿಸಿದರು.