ಗೋಕರ್ಣದ ಅಘನಾಶಿನಿ ನದಿ ಹಿನ್ನೀರಿನ ಹೊಸ್ಕಟ್ಟ ಗ್ರಾಮದಲ್ಲಿನ ಶಾಲೆಗೆ ಹೋಗುವ ಅಪಾಯಕಾರಿ ಇಕ್ಕಟ್ಟಾದ ಕಾಲುದಾರಿಯನ್ನು ಶಾಸಕ (MLA) ದಿನಕರ ಶೆಟ್ಟಿ ಗ್ರಾಮಸ್ಥರೊಂದಿಗೆ ಖುದ್ದಾಗಿ ಪರಿಶೀಲಿಸಿದರು. ಮಹೇಶ ಎನ್. ನಾಯಕ, ಶಿವಾನಂದ ಹೊಸ್ಕಟ್ಟ, ಪ್ರಮೋದ ಹೊಸ್ಕಟ್ಟ, ನಾಗರಾಜ ಹೊಸ್ಕಟ್ಟ, ಭಾಸ್ಕರ ಹೊಸ್ಕಟ್ಟ ಇತರರಿದ್ದರು. 
ಉತ್ತರ ಕನ್ನಡ

ಕಾಲು ಹಾದಿಯಲ್ಲಿ ಹೆಜ್ಜೆ ಹಾಕಿದ ಶಾಸಕ MLA

ವಿನಯ ಹೆಗಡೆ
ಗೋಕರ್ಣ: ಇಲ್ಲಿನ ಅಘನಾಶಿನಿ ನದಿ ಹಿನ್ನೀರಿನಲ್ಲಿರುವ ಮೀನುಗಾರರ ಗ್ರಾಮ ಹೊಸ್ಕಟ್ಟದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಅತ್ಯಂತ ಇಕ್ಕಟ್ಟಾದ ಅಪಾಯಕಾರಿ ಕಾಲುದಾರಿಯನ್ನು (MLA) ಶಾಸಕ ದಿನಕರ ಶೆಟ್ಟಿ ಸ್ವತಃ ನಡೆದು ಪರಿಶೀಲಿಸಿದರು.
ಕಳೆದ ವರ್ಷ ಮಳೆಗಾಲದಲ್ಲಿ ಉಂಟಾಗಿದ್ದ ಪ್ರವಾಹದ ವೇಳೆ ಬೃಹತ್ ಗುಡ್ಡ ಕುಸಿತ ಉಂಟಾದ ಅಪಾಯಕಾರಿ ಸ್ಥಳದ ಸನಿಹದಲ್ಲಿ ಈ ಶಾಲೆಯಿದೆ.
ಶಾಲೆಗೆ ಹೋಗಲು ಅತ್ಯಂತ ಇಕ್ಕಟ್ಟಾದ ಕಾಲುದಾರಿ ಗುಡ್ಡದ ಇಳಿಜಾರಿನಲ್ಲಿದ್ದು, ಭಾರೀ ಮಳೆ ಸುರಿದಾಗ ದೊಡ್ಡ ಪ್ರಮಾಣದಲ್ಲಿ ಪ್ರವಾಹದಂತೆ ಬರುವ ನೀರು ಈ ಕಾಲು ದಾರಿಯಲ್ಲೇ ಹರಿದು ಹೋಗುತ್ತದೆ.
ಇಂತಹ ಸಮಯದಲ್ಲಿ ಕಾಲುದಾರಿ ಹಳ್ಳವಾಗಿ ಪರಿವರ್ತಿತವಾಗಿ ಮಕ್ಕಳ ಜೀವಭಯಕ್ಕೆ ಕಾರಣವಾಗುತ್ತದೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಶಾಲಾ ಸಮಿತಿಯವರ ಮನವಿಯ ಮೇರೆಗೆ ಶನಿವಾರ ಮಧ್ಯಾಹ್ನ ಶಾಸಕರು ಮುಖ್ಯ ರಸ್ತೆಯಿಂದ ಶಾಲೆಗೆ ಹೋಗುವ ಒಳಭಾಗದ ಅಂದಾಜು ಮುಕ್ಕಾಲು ಕಿಮೀ ಕಾಲುದಾರಿ ಮತ್ತು ಶಾಲೆಯನ್ನು ಭೇಟಿ ಮಾಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಯೋಗ್ಯ ವ್ಯವಸ್ಥೆಯ ಭರವಸೆ

ಕಾಲುದಾರಿ ಸಮಸ್ಯೆಯ ಬಗ್ಗೆ ಮಾತನಾಡಿದ ಶಾಸಕರು ಪುಟ್ಟ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಲುದಾರಿಯನ್ನು ವಿಸ್ತರಿಸಿ ಸರಾಗ ಸಂಚಾರಕ್ಕೆ ಯೋಗ್ಯವಾಗು ವಂತೆ ಅಭಿವೃದ್ಧಿ ಮಾಡುವ ತುರ್ತು ಅಗತ್ಯವಿದೆ.
ಜತೆಗೆ ಮಳೆಯ ದಿನಗಳಲ್ಲಿ ಪ್ರವಾಹದ ನೀರು ರಭಸವಾಗಿ ಹರಿಯುವ ಭಾಗದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗೆಗೆ ಸಹ ನಿರ್ಧರಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಆದಷ್ಟು ತ್ವರಿತವಾಗಿ ಸಂಬಂಧಿಸಿದ ಇಂಜನಿಯರ್‌ರಿಂದ ಸ್ಥಳ ಸಮೀಕ್ಷೆಗೆ ಏರ್ಪಾಟು ಮಾಡಲಾಗುವುದು.
ಜತೆಗೆ ರಸ್ತೆಯನ್ನು ಸಂಪೂರ್ಣ ಸುರಕ್ಷಿತವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಅನುದಾನದ ಏರ್ಪಾಟಿನ ಕುರಿತಾಗಿಯೂ ಪ್ರಯತ್ನಿಸಲಾಗುವುದು ಎಂದು ಗ್ರಾಮಸ್ಥರಿಗೆ ಆಶ್ವಾಸನೆಯಿತ್ತರು.
ಗ್ರಾಪಂ ಸದಸ್ಯ ಮಹೇಶ ಎನ್. ನಾಯಕ, ತದಡಿ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಶಿವಾನಂದ ಹೊಸ್ಕಟ್ಟ, ಗ್ರಾಮದ ಪ್ರಮೋದ ಹೊಸ್ಕಟ್ಟ, ನಾಗರಾಜ ಹೊಸ್ಕಟ್ಟ, ಭಾಸ್ಕರ ಹೊಸ್ಕಟ್ಟ ಮತ್ತಿತರರಿದ್ದರು.