ಭಟ್ಕಳದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಹೆದ್ದಾರಿ ವಿಸ್ತರಣೆಯನ್ನು ಖುದ್ದಾಗಿ ಪರೀಶಿಲಿಸಲು ಜಿಲ್ಲಾಡಳಿತವನ್ನೆ ಸ್ಥಳಕ್ಕೆ ಕರೆಯಿಸಿ (Minister) ಸಚಿವ ಮಂಕಾಳ ವೈದ್ಯ ಅಗತ್ಯ ಸಲಹೆಗಳನ್ನು ನೀಡಿದರು. ಡಿಸಿ ಕೆ.ಲಕ್ಷ್ಮೀಪ್ರಿಯಾ, ಎಡಿಸಿ ಸಾಜಿದ ಮುಲ್ಲಾ ಇತರರು ಇದ್ದರು. 
ಉತ್ತರ ಕನ್ನಡ

ಹೆದ್ದಾರಿಯಲ್ಲೇ ಅಧಿಕಾರಿಯ ಬೆವರಿಳಿಸಿದ ಸಚಿವ! Minister

ಪ್ರಮುಖ ಮುಖ್ಯಾಂಶಗಳು

  • ಆಮೆಗತಿಯಲ್ಲಿ ಸಾಗಿದ ಹೆದ್ದಾರಿ ವಿಸ್ತರಣೆ ಕಾಮಗಾರಿ
  • ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲು ಸೂಚನೆ
  • ಹೆದ್ದಾರಿ ಯೋಜನೆ ಅಧಿಕಾರಿ ಶ್ರೀನಿವಾಸಗೆ ಕ್ಲಾಸ್
ಭಟ್ಕಳ: ಇಲ್ಲಿನ ಬೈಪಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಇದರಿಂದ ಪ್ರತಿದಿನ ಅಪಘಾತಗಳು ಹಾಗೂ ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ (Minister) ಸಚಿವ ಮಂಕಾಳ ವೈದ್ಯ ಹೆದ್ದಾರಿ ಯೋಜನೆ ಅಧಿಕಾರಿ ಶ್ರೀನಿವಾಸ ಅವರಿಗೆ ಸೂಚನೆ ನೀಡಿದರು.
ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳ ಬೆವರು ಇಳಿಸಿದರು.
ಮಳೆಗಾಲ ಆರಂಭವಾಗಲು ಕೇವಲ 15 ದಿನಗಳು ಮಾತ್ರ ಬಾಕಿ ಇವೆ. ಆದರೆ ಇಲ್ಲಿ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ.
ಮಳೆ ಸುರಿಯಲು ಆರಂಭವಾದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದಿಲ್ಲ. ತಾಲೂಕಿನಾದ್ಯಂತ ಇದೇ ರೀತಿಯ ಗಂಭೀರ ಸಮಸ್ಯೆಗಳು ಎದುರಾಗಿವೆ.
ಹೆದ್ದಾರಿ ವಿಸ್ತರಣೆ ಕಾಮಗಾರಿಯ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಸಚಿವರು ಜಿಲ್ಲಾಡಳಿತವನ್ನು ಸ್ಥಳಕ್ಕೆ ಕರೆಸಿ ವಾಸ್ತವ ಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದು, ಪರಿಸ್ಥಿತಿ ಅರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರಿಗೆ ನಿರ್ದೇಶನ ನೀಡಿದರು.
ಭಟ್ಕಳ ಸರ್ಕಲ್ ಹಾಗೂ ರಂಗಿನಕಟ್ಟೆ ಭಾಗದಲ್ಲಿ ನಿರ್ಮಿಸಿರುವ ಡ್ರೈನೇಜ್ ಕುರಿತು ಕೂಡ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಡ್ರೈನೇಜ್ ನಿರ್ಮಾಣ ಮಾಡಿರುವುದು ಸರಿ. ಆದರೆ ಅದರಲ್ಲಿ ಹರಿದು ಬರುವ ನೀರು ಹೋಗುವುದೆಲ್ಲಿ? ಎಂದು ಹೆದ್ದಾರಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಬಳಿಕ ಸರಾಬಿ ನದಿಗೆ ಮಳೆ ನೀರು ಹರಿದು ಹೋಗುವಂತೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ಪೌರಾಯುಕ್ತ ಬಾಬಾಸಾಹೇಬ ಮಾನೆ ಹಾಗೂ ಭಟ್ಕಳ ಉಪವಿಭಾಗಾಧಿಕಾರಿ ಮಹೇಶ್ ಜಿ. ಅವರಿಗೆ ಸಚಿವರು ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಕೆಲವೊಮ್ಮೆ ಸ್ಥಳೀಯರಿಂದ ಅಡ್ಡಿಗಳು ಉಂಟಾಗುತ್ತಿವೆ ಎಂದು ತಮ್ಮ ಅಸಾಯಕತೆಯನ್ನು ತೊಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, ಸ್ಥಳದಲ್ಲಿದ್ದ ಡಿವೈಎಸ್ಪಿ ಮಹೇಶ್ ಅವರಿಗೆ ಸೂಚನೆ ನೀಡಿ, ಅಗತ್ಯ ಸಹಕಾರ ನೀಡಬೇಕು ಎಂದು ಆದೇಶಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ ನಾಯ್ಕ ಮಾತನಾಡಿ, ಮಳೆ ನೀರು ಹರಿದು ಹೋಗಲು ಚರಂಡಿ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಬೇಕೆಂಬ ನಿಬಂಧನೆಯನ್ನು ಮೊದಲೇ ವಿಧಿಸಲಾಗಿತ್ತು.
ನಮ್ಮ ಒತ್ತಡಕ್ಕೆ ಮಣಿದು ಸರ್ವಿಸ್ ರಸ್ತೆ ಹಾಗೂ ಗಟಾರ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆರಂಭದಲ್ಲಿ ಆ ಕೆಲಸ ಪ್ರಾರಂಭಿಸಿದ್ದರು.
ಆದರೆ ನಂತರ ಗಟಾರ ಮತ್ತು ಸರ್ವಿಸ್ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕೇವಲ ಹೆದ್ದಾರಿ ಕಾಮಗಾರಿಯನ್ನು ಮಾತ್ರ ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಧ್ಯ ಪ್ರವೇಶಿಸಿದ ಸಚಿವ ಮಂಕಾಳ ವೈದ್ಯ ಒಂದೊಂದಾಗಿ ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಲಿದ್ದಾರೆ.
ಅದಕ್ಕಾಗಿ ಅವರನ್ನು ಸ್ಥಳಕ್ಕೆ ಕರೆಯಿಸಿದ್ದೇನೆ. ಸಾರ್ವಜನಿಕರು ಸಹಕಾರ ನೀಡುವಂತೆ ಕೊರಿದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಎಸಿ ಮಹೇಶ ಜಿ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಐಆರ್‌ಬಿ ಇಂಜಿನಿಯರ್ ಸುದೇಶ ಶೆಟ್ಟಿ ಮತ್ತಿತರರಿದ್ದರು.