ಶಿರಸಿಯಲ್ಲಿ ಸಪ್ತಕ ಸಂಸ್ಥೆ ಆಯೋಜಿಸಿದ್ದ ಋತುಗಾನ ವ್ಯಾಖ್ಯಾನಕ್ಕೆ ಆರ್. ಗಣೇಶ ಚಾಲನೆ ನೀಡಿದರು. ವೈಶಾಲಿ ವಿ.ಪಿ. ಹೆಗಡೆ, ಜಿ.ಎಸ್. ಹೆಗಡೆ ಇತರರಿದ್ದರು. 
ಉತ್ತರ ಕನ್ನಡ

ಭರತ ಭೂಮಿ ಸ್ವರ್ಗಕ್ಕಿಂತ ಮಿಗಿಲು

ಪ್ರಮುಖ ಮುಖ್ಯಾಂಶಗಳು

  • ಋತುಗಾನ - ವ್ಯಾಖ್ಯಾನದಲ್ಲಿ ಶತಾವಧಾನಿ ಆರ್. ಗಣೇಶ ಅಭಿಪ್ರಾಯ
ಶಿರಸಿ: ಎಲ್ಲ ಋತುಗಳು ಒಳಗೊಂಡಿರುವ ಭರತ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂದು ಶತಾವಧಾನಿ, ಪದ್ಮಭೂಷಣ ಡಾ. ಆರ್. ಗಣೇಶ ಹೇಳಿದರು.
ನಗರದ ರಂಗಧಾಮದಲ್ಲಿ ಬೆಂಗಳೂರಿನ ಸಪ್ತಕ ಸಂಸ್ಥೆ ಹಮ್ಮಿಕೊಂಡಿದ್ದ ಋತುಗಾನ - ವ್ಯಾಖ್ಯಾನದಲ್ಲಿ ಅವರು ಮಾತನಾಡಿದರು.
ವೇದ ಕಾಲದಿಂದ್ ಹಿಡಿದು ಋತುಗಳ ವರ್ಣನೆ ಮಾಡಲಾಗಿದೆ. ಭೂಮಿ, ವಾಯು, ಆಕಾಶ ಎಲ್ಲವೂ ಕಾವ್ಯ, ಸನಾತನ, ದೈವಿಕ ದೃಷ್ಟಿಯಿಂದಲೂ ಮಹತ್ವದ್ದು. ಸನಾತನ ದೃಷ್ಟಿಯಿಂದಲೂ ಭರತ ಭೂಮಿ ಈ ಕಾರಣಗಳಿಂದ ಸ್ವರ್ಗಕ್ಕಿಂತ ಮಿಗಿಲು ಎಂದರು.
ಋತುಗಳಿಗೆ ಸರಿಯಾಗಿ ಭಾರತೀಯ ಸಾಹಿತ್ಯ ಪೂರಕವಾಗಿದೆ. ಗ್ರೀಕ್‌ನಲ್ಲಿ ಇದೇ ಮಾದರಿಯ ಭೂಮಿ ಇತ್ತಂತೆ. ಈಗ ಅಲ್ಲಿ ಇಲ್ಲ. ಭಾರತದಲ್ಲಿ ಉಳಿದುಕೊಂಡಿದೆ ಎಂದರು.
ಭಾರತದಲ್ಲಿ ಋತುಗಳ ಆಚರಣೆ ಇದೆ. ಆ ಋತುಗಳನ್ನು ಪೂಜಿಸುತ್ತಾರೆ. ಋತು ಆಧಾರಿತ ಜೀವನ ಕ್ರಮವೇ ಆಗಿದೆ. ವೇದ, ಉಪನಿಷತ್ತು, ಶಾಸ್ತ್ರ ಗ್ರಂಥಗಳಲ್ಲಿ, ಸಂಗೀತದಲ್ಲಿ ಕೂಡ ಋತುಗಳ ಸ್ಪರ್ಷ ಇದೆ ಎಂದ ಅವರು, ಋತುಗಳನ್ನು ನಾವು ಹಾಳು ಮಾಡುತ್ತಿದ್ದೇವೆ. ಭೂಮಿಯನ್ನು ಕೊಚ್ಚೆ ಮಾಡುತ್ತಿದ್ದೇವೆ. ಪರಿಸರದಲ್ಲಿ ಬಣ್ಣ ಬೆಡಗು ಕಾಣದಿದ್ದರೆ ಸಂಸ್ಕೃತಿಯಲ್ಲಾದರೂ ಮಾಡಿಕೊಳ್ಳಬೇಕು ಎಂದರು.
ವರ್ಷಧಾರೆಯ ಲೆಕ್ಕದಲ್ಲಿ ವರ್ಷ ಅಳೆಯುವುದು ಇದೆ. ಭಾರತ ವರ್ಷ ಎಂದೂ ಭಾರತದ ಕಾಲ ಹೇಳುವುದು ಇದೆ. ಕಾಲದ ಸಂಕೇತ ದೇಶದ ಸಂಕೇತವೂ ವರ್ಷಕ್ಕಿದೆ ಎಂದು ಬಣ್ಣಿಸಿದರು.

ಋತುವಿಗೆ ವ್ಯಾಖ್ಯಾನ, ಕಾವ್ಯದ ಬೆಸುಗೆ:

ಋತು ಹಾಗೂ ಗಾನದ ಕಲ್ಪನೆಯನ್ನು ಸ್ವರಚಿತ ಕನ್ನಡದ ಕೃತಿಗಳನ್ನು ನೀಡಿದ ಡಾ. ರವೀಂದ್ರ ಗುರುರಾಜ ಕಾಟೋಟಿ ಅವರು ಹಾರ್ಮೋನಿಯಂ ಸಾಥ್ ನೀಡಿದರು. ತಬಲಾದಲ್ಲಿ ಗುರುರಾಜ ಆಡುಕಳ, ಗಾಯನದಲ್ಲಿ ರೇಷ್ಮಾ ಭಟ್, ಡಾ. ಆದಿತ್ಯ ಪಲ್ಲಕ್ಕಿ ಹಾಡಿದರು.
ಈ ವೇಳೆ ಮಾತನಾಡಿದ ಸಪ್ತಕ ಜಿ.ಎಸ್. ಹೆಗಡೆ, ಸಂಗೀತದ ಒಳನೋಟ ಹಾಗೂ ಹೆಚ್ಚಿನ ಸಾಧ್ಯಾಸಾಧ್ಯತೆಯನ್ನು ತೋರುವ ಕಾರ್ಯಕ್ರಮ ಇದಾಗಿದ್ದು, ಇನ್ನೂ ಹಲವು ವಿಶೇಷ, ವಿಶಿಷ್ಟ ಕಾರ್ಯಮಗಳನ್ನು ಶಿರಸಿ ಸುತ್ತ ಮುತ್ತಲಿನ ಪ್ರಜ್ಞಾವಂತ ಕಲಾಸಕ್ತರಿಗೆ ನೀಡಲು ಸಪ್ತಕ ಉತ್ಸುಕವಾಗಿದೆ ಎಂದರು. ಇದಕ್ಕೂ ಮುನ್ನ ಡಾ. ಗಣೇಶ ದೀಪ ಬೆಳಗಿಸಿದರು. ಸಪ್ತಕದ ಜಿ ಎಸ್. ಹೆಗಡೆ, ವೈಶಾಲಿ ವಿ.ಪಿ. ಹೆಗಡೆ, ಶಾರದಾ ಕಾಟೋಟಿ ಇತರರಿದ್ದರು.

ರಾಗದ ಮೂಲಕ ಋತುವನ್ನು ಕಟ್ಟಿಕೊಡುವುದು ಭಾರತೀಯ ಸಂಗೀತದ ಶಕ್ತಿ. ಭಾರತೀಯ ಶಿಷ್ಟಕಲಾ ಪ್ರಕಾರಗಳ ಅಂತರ್ಗತ ಶಕ್ತಿಯ ಮೂಲಕ ಏನೆಲ್ಲಾ ಪ್ರದರ್ಶಿಸಬಹುದು, ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆ. ಇದೊಂದು ಸಪ್ತಕದ ಸಾರ್ಥಕ ಸೇವೆ.