ಯೋಗ ಪಟ್ಟಾಭಿಷೇಕ ನಿಮಿತ್ತ ಗೋಕರ್ಣದ ಅಶೋಕೆಯ ಗುರುದೃಷ್ಟಿ ಭವನದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
- ರಾಘವೇಶ್ವರ ಶ್ರೀಗಳಿಂದ ಯೋಗ ಪಟ್ಟಾಭಿಷೇಕ ಆಶೀರ್ವಚನ
- ಅಶೋಕೆಯಲ್ಲಿ ವಿಶೇಷ ಧರ್ಮಸಭೆ
ಗೋಕರ್ಣ: ಯೋಗ ಪಟ್ಟಾಭಿಷೇಕ ಯತಿಗಳ ಬದುಕಿನ ಆಂತರ್ಯ ವೈಭವವನ್ನು ನಿರೂಪಿಸುವ ಮಹಾಸುದಿನ. ನಿಜ ವೈಭವವಾದ ಒಳಗಿನ ಬೆಳಕನ್ನು ಪಡೆದು ಅನಿರ್ವಚನೀಯ ಆತ್ಮಾನುಭವವನ್ನು ಆತ್ಮಾರಾಮ ದಯಪಾಲಿಸುವ ದುಃಖ ಸಂಯೋಗದ ವಿಯೋಗವೇ ಯೋಗ ಪಟ್ಟಾಭಿಷೇಕವಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀ ಮಠದ ಸಮಸ್ತ ಶಿಷ್ಯ ಭಕ್ತರು ಶ್ರೀಗಳ ವಾರ್ಷಿಕ ಯೋಗ ಪಟ್ಟಾಭಿಷೇಕ ದಿನ ನಿಮಿತ್ತ ಚೈತ್ರ ಶುದ್ಧ ಷಷ್ಟಿ ಮಂಗಳವಾರ ಆಯೋಜಿಸಿದ್ದ ವಿಶೇಷ ಧರ್ಮಸಭೆಯಲ್ಲಿ ಅವರು ಆಶೀರ್ವಚನ ಅನುಗ್ರಹಿಸಿದರು.
ಯೋಗ ಪಟ್ಟಾಭಿಷೇಕ ಸಮಾರಂಭದ ಮೂಲಕ ಸನ್ಯಾಸ ಸ್ವೀಕರಿಸಿದ ಯತಿಗಳಿಗೆ ನೂತನ ನಾಮಕರಣ ಪ್ರದಾನವಾಗಿಸಲಾಗುತ್ತದೆ. ಈ ದಿನದಂದು ಸನ್ಯಾಸ ವೈಭವದ ನಿರೂಪಣೆಯಾಗುತ್ತದೆ. ಇದು ಯೋಗ ಮಾರ್ಗಕ್ಕೆ ಸಂಬಂಧಿಸಿದ ದಿನ. ಹೀಗಾಗಿ ಪ್ರಾಪಂಚಿಕರ ಜೀವನ ವೈಭವಕ್ಕೂ ಸನ್ಯಾಸಿಗಳ ವೈಭವಕ್ಕೂ ವ್ಯತ್ಯಾಸವನ್ನು ನಿರೂಪಿಸುವ ದಿನವೂ ಹೌದು. ಕಾವಿ, ತ್ಯಾಗ, ಅಧ್ಯಾತ್ಮ, ಏಕಾಂತ, ಅಂತರ್ಮುಖಗಳೇ ಸನ್ಯಾಸದ ವೈಭವಗಳಾಗಿವೆ. ಯತಿಗಳಂತೆ ಪ್ರತಿ ವ್ಯಕ್ತಿಗೂ ಯೋಗ ಪಟ್ಟಾಭಿಷೇಕವಿದೆ. ಎಲ್ಲರ ಬದುಕಿನಲ್ಲೂ ಯೋಗ ಪಟ್ಟಾಭಿಷೇಕ ಬರುವಂತಾಗಬೇಕು. ತಮಗೆ ಅತ್ಯಂತ ಇಷ್ಟವಾದುದನ್ನು ಬಿಡುವುದು. ತಾವು ಪ್ರಾಪಂಚಿಕವಾಗಿ ಹೆಚ್ಚು ಬಯಸುವುದನ್ನು ತೊರೆಯುವುದೇ ವೈಯಕ್ತಿಕ ಯೋಗ ಪಟ್ಟಾಭಿಷೇಕವಾಗಿದೆ.
ಆತ್ಮಾನುಭವದ ಆತ್ಮಾರಾಮ; ಪ್ರಭು ಶ್ರೀ ರಾಮಚಂದ್ರ ಅನಂತ ನಾಮಗಳಿಂದ ಬೆಳಗಿದ ಮಹಾಪುರುಷನಾಗಿದ್ದಾನೆ. ಅವುಗಳಲ್ಲಿ ಈ ಯೋಗ ಪಟ್ಟಾಭಿಷೇಕವನ್ನು ಅನುಗ್ರಹಿಸುವವನನ್ನು ಆತ್ಮಾರಾಮ ಎಂಬ ಅಭಿನಾಮದಿಂದ ಪೂಜಿಸಲಾಗುತ್ತದೆ. ಲಂಕೆಯ ರಾವಣನಂತೆ ನಮ್ಮ ಮನಸು ಕೂಡ ಅಂಕೆಗೆ ಸಿಗಲಾರದ ದಶಮುಖಗಳನ್ನು ಉಳ್ಳದ್ದಾಗಿದೆ. ದೇಶಕ್ಕೆ ಒಬ್ಬ ರಾಜ ಇರುವಂತೆ ನಮ್ಮ ದೇಹ ಎಂಬ ರಾಜನಿಗೆ ಆತ್ಮ ಎಂಬ ಹೆಸರು. ಈ ಆತ್ಮರಾಜನಿಗೆ ಅಂತರ್ ಶತ್ರುಗಳಾದ ಕಾಮ, ಕ್ರೋಧ, ಮದ, ಮೋಹ, ಮತ್ಸರಾದಿ ವೈರಿಗಳನ್ನು ವಿವೇಕ ಎಂಬ ಶರಜಾಲಗಳಿಂದ ಆತ್ಮಾರಾಮ ನಾಶಗೊಳಿಸುವುದೇ ಯೋಗ ಪಟ್ಟಾಭಿಷೇಕವಾಗಿದೆ.
ಈ ದಿನದ ಅತ್ಯಂತ ಭಕ್ತಿಪೂರ್ವಕವಾದ ಆಚರಣಾ ವೈಭವದ ಹಿಂದೆ ನಿಮ್ಮಂತಹ ಶ್ರೀಮಠದ ಸಮಸ್ತ ಶಿಷ್ಯ ಭಕ್ತರ ಸುಮನಸುಗಳಿವೆ.ನಿಮ್ಮೆಲ್ಲರ ಶುದ್ಧಾಂತರಂಗ ಭಾವಗಳ ಪ್ರಕಟಣೆ ಈ ದಿನದ ಆಯೋಜನೆಯಲ್ಲಿದೆ. ಈ ಯೋಗ ಪಟ್ಟಾಭಿಷೇಕ ದಿನದಂದು ಆತ್ಮಾರಾಮ ನಿಮ್ಮೆಲ್ಲರಿಗೆ ಅಂತಃಶಾಂತಿ ಮತ್ತು ಅಂತರಾನಂದವನ್ನು ಮೊಗೆಮೊಗೆದು ಕೊಡಲಿ. ಆ ಮೂಲಕ ಅನಿರ್ವಚನೀಯವಾದ ಆತ್ಮಾನುಭವದ ಆ ದಾರಿ ಎಲ್ಲರಿಗೂ ಪ್ರಾಪ್ತವಾಗುವಂತಾಗಲಿ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಭಟ್ಟ ಸುವರ್ಣಗದ್ದೆ ಮತ್ತಿತರ ಶಿಷ್ಯಭಕ್ತರು ನಿರ್ವಹಿಸಿದರು.