ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್ ಪ್ರೊಡ್ಯುಸರ್ ಕಂಪನಿ ಎದುರಿನ ಹೊಳೆಯಂಚಿನಲ್ಲಿ ವನಮಹೋತ್ಸವಕ್ಕೆ ಅಜಯಕುಮಾರ ಎಂ.ಎಸ್. ಚಾಲನೆ ನೀಡಿದರು. ಎಸ್. ಆರ್. ಹೆಗಡೆ ಕುಂಬಾರಕುಳಿ, ಉಮಾಕಾಂತ ಹೆಗಡೆ, ಜಿ.ಆರ್. ಹೆಗಡೆ ಬೆಳ್ಳೆಕೇರಿ ಇತರರಿದ್ದರು.
- ಪರಿಸರ ಬರಹಗಾರ ಶಿವಾನಂದ ಕಳವೆ ಅಭಿಪ್ರಾಯ
- ಹಾರ್ಸಿಕಟ್ಟಾದಲ್ಲಿ ಬೆಟ್ಟದ ಹಕ್ಕುಗಳ ಜಾಗೃತಿ ಸಭೆ
ಸಿದ್ದಾಪುರ: ಬೆಟ್ಟ ಎನ್ನುವುದು ಜಿಲ್ಲೆಯ ಕೃಷಿಕರ ಅವಿಭಾಜ್ಯ ಅಂಗ. ಬೆಟ್ಟ ಬಳಕೆಯ ಕುರಿತು ಇರುವ ತಿಳಿವಳಿಕೆ ದೋಷದಿಂದ ಕೆಲವು ವ್ಯತ್ಯಯವಾಗಿದೆ. ಬೆಟ್ಟವನ್ನು ಯಾರೂ ಅತಿಕ್ರಮಣ ಮಾಡಿಲ್ಲ, ಮಾಡುವುದಿಲ್ಲ. ಬೇರೆಯವರು ಬಂದು ಅತಿಕ್ರಮಣ ಮಾಡಲು ಬಿಡುವುದಿಲ್ಲ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾದ ಅಘನಾಶಿನಿ ಸ್ಪೈಸ್ ಪ್ರೊಡ್ಯುಸರ್ ಕಂಪನಿ ಆವರಣದಲ್ಲಿ ಅಘನಾಶಿನಿ ಕಂಪನಿ, ವಿಎಸ್‌ಎಸ್ ಹಾರ್ಸಿಕಟ್ಟಾ, ಜಿಲ್ಲಾ ಅಡಿಕೆ ಮತ್ತು ಸಂಬಾರು ಬೆಳೆಗಾರರ ಸಂಘ ಶಿರಸಿ ಆಶ್ರಯದಲ್ಲಿ ಏರ್ಪಡಿಸಿದ್ದ ಬೆಟ್ಟದ ಹಕ್ಕುಗಳ ಜಾಗೃತಿ ಸಭೆ ಹಾಗೂ ವನಮಹೋತ್ಸವದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಅಡಿಕೆ ಮತ್ತು ಸಾಂಬಾರು ಬೆಳೆಗಾರ ಸಂಘದ ಪ್ರಮುಖರಾದ ಜಿ.ಆರ್. ಹೆಗಡೆ ಬೆಳ್ಳೆಕೇರಿ ಮಾತನಾಡಿ, ಬೆಟ್ಟದ ಆರ್‌ಟಿಸಿಯಲ್ಲಿರುವ ‘ಬಿ’ ಖರಾಬು ಸಮಸ್ಯೆ ಸದ್ಯದಲ್ಲಿಯೇ ಬಗೆಹರಿಯುವ ಸಾಧ್ಯತೆ ಇದೆ. ರೈತರು ತಮ್ಮ ಆರ್‌ಟಿಸಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಯಾವ ಸರ್ವೇ ನಂಬರ್‌ಗೆ ಬೆಟ್ಟದ ಹಕ್ಕು ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಆರ್‌ಎ್ಒ ಅಜಯಕುಮಾರ ಎಂ.ಎಸ್. ಮಾತನಾಡಿ, ಬೆಟ್ಟದ ಜಾಗಗಳಲ್ಲಿ ಯಾವುದೇ ಕಾರಣಕ್ಕೂ ಅರಣ್ಯೇತರ ಚಟುವಟಿಕೆಗಳನ್ನು ನಡೆಸಲು ಅಥವಾ ಬೆಳೆಸಲು ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು.
ಪರಿಸರ ವಿಜ್ಞಾನಿ ಬಾಲಚಂದ್ರ ಸಾಯೀಮನೆ ಅವರು ನದಿ ತಿರುವಿನ ಯೋಜನೆಗಳಿಂದಾಗುವ ಸಾಧಕ-ಬಾಧಕದ ಕುರಿತು ಮನವರಿಕೆ ಮಾಡಿಕೊಟ್ಟರು.
ಪ್ರಗತಿಪರ ಕೃಷಿಕ ಯಡಳ್ಳಿ ಗಣೇಶ, ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಂತ ಗೊಂಟನಾಳ, ಹಾರ್ಸಿಕಟ್ಟಾ ವಿಎಸ್‌ಎಸ್ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ಅಘನಾಶಿನಿ ಕಂಪನಿಯ ನಿರ್ದೇಶಕರು ಇತರಿರದ್ದರು.
ಇದೇ ಸಂದರ್ಭದಲ್ಲಿ ಹದಿನಾರನೇ ಮೈಲ್‌ಕಲ್ ಅರಣ್ಯ ಇಲಾಖೆ ನರ್ಸರಿಯಲ್ಲಿ ಒಂದು ಕೋಟಿ ಸಸಿಗಳನ್ನು ಬೆಳೆಸಿದ ಸಸ್ಯಪಾಲಕ ಸುರೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಅಘನಾಶಿನಿ ಸ್ಪೈಸ್ ಪ್ರೊಡ್ಯೂಸರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಹೆಗಡೆ ಕುಂಬಾರಕುಳಿ ಸ್ವಾಗತಿಸಿದರು. ಕಂಪನಿಯ ನಿರ್ದೇಶಕ ರವಿ ಹೆಗಡೆ ಹೊಂಡಗಾಶ್ಗಿ, ಲೋಕೇಶ ಹೆಗಡೆ ಹಾಗೂ ನಾಗರಾಜ ಮತ್ತಿಗಾರ ಕಾರ್ಯಕ್ರಮ ನಿರ್ವಹಿಸಿದರು. ಸಿಇಒ ದರ್ಶನ ಹೆಗಡೆ ಮತ್ತು ಸಿಬ್ಬಂದಿ ಸಹಕರಿಸಿದರು.