ಯಲ್ಲಾಪುರದ ಅಡಕೆ ಭವನದಲ್ಲಿ ಬಿಜೆಪಿಯ ಜಿಲ್ಲಾ ಕಾರ್ಯಕಾರಿ ಸಭೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ಹರಿಪ್ರಕಾಶ ಕೋಣೆಮನೆ, ಎನ್.ಎಸ್. ಹೆಗಡೆ, ವೆಂಕಟೇಶ ನಾಯ್ಕ, ಶಿವಾನಂದ ನಾಯ್ಕ ಇತರರಿದ್ದರು. 
ಉತ್ತರ ಕನ್ನಡ

ವಿಮೆ ವಿಚಾರದಲ್ಲಿ ನಿದ್ದೆಗೆ ಜಾರಿದ ಸರ್ಕಾರ

ಯಲ್ಲಾಪುರ: ಬೆಳೆ ವಿಮೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿದ್ದೆಯಲ್ಲಿದೆ. ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಕೊಡಿಸಿಯೇ ಸಿದ್ಧ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ಶನಿವಾರ ಪಟ್ಟಣದ ಅಡಕೆ ಭವನದಲ್ಲಿ ಬಿಜೆಪಿಯ ಜಿಲ್ಲಾ ಕಾರ್ಯಕಾರಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆವಿಮೆ ಬರದೇ ಇರಲು ಮಳೆಮಾಪನ ಯಂತ್ರಗಳ ಸಮಸ್ಯೆ ಕಾರಣ ಎಂಬ ಮಾತನ್ನೇ ಇನ್ನೂ ರಾಜ್ಯ ಸರ್ಕಾರ ಹೇಳುತ್ತಿದೆ. ಅದನ್ನು ಸರಿಪಡಿಸುವ ಬದ್ಧತೆಯನ್ನು ಸರ್ಕಾರ ತೋರಿಸುತ್ತಿಲ್ಲ ಎಂದು ಟೀಕಿಸಿದರು.
ಇತ್ತೀಚೆಗೆ ಜಿಲ್ಲೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭೇಟಿ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಗಿದೆ. ಇಬ್ಬರೂ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಮಾತುಗಳನ್ನಾಡಿಲ್ಲ. ಜಿಲ್ಲೆಯ ಜನರನ್ನು ಅಗೌರವದಿಂದ ನೋಡಿ, ಜನರ ಭಾವನೆಗಳನ್ನು ಧಿಕ್ಕರಿಸಿದ್ದಾರೆ. ಶರಾವತಿ ಪಂಪ್ಡ್ೃ ಸ್ಟೋರೇಜ್, ಬೇಡ್ತಿ-ಅಘನಾಶಿನಿ ಯೋಜನೆಯ ತೂಗುಗತ್ತಿ, ಬೆಳೆ ವಿಮೆ, ಎಲೆಚುಕ್ಕಿ ರೋಗ ಸೇರಿದಂತೆ ಹಲವು ಸಮಸ್ಯೆಗಳು ಜಿಲ್ಲೆಯಲ್ಲಿದ್ದರೂ ಅದರ ಬಗ್ಗೆ ಚಕಾರವೆತ್ತಿಲ್ಲ. ನಮ್ಮ ಜಿಲ್ಲೆಯ ಕಾಂಗ್ರೆಸ್ ಶಾಸಕರೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿಲ್ಲ. ಇದು ಜಿಲ್ಲೆಯ ಬಗ್ಗೆ ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹೊಂದಿರುವ ಉದಾಸೀನ ಭಾವನೆಯನ್ನು ತೋರಿಸುತ್ತಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿಬಿ ಜಿ ರಾಮ್ ಜಿ ಕುರಿತಾದ ಅಭಿನಂದನಾ ನಿರ್ಣಯವನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಂಡಿಸಿದರು.
ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಶಿಕ್ಷಣ ಪ್ರಕೋಷ್ಠದ ರವಿ ಹೆಗಡೆ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯಕ, ಜಿಲ್ಲಾ ಮಾಜಿ ಅಧ್ಯಕ್ಷರಾದ ವೆಂಕಟೇಶ ನಾಯ್ಕ, ಕೆ.ಜಿ. ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಎಲ್.ಟಿ.ಪಾಟೀಲ, ಅಶೋಕ ಚಲವಾದಿ, ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ ಇತರರಿದ್ದರು.
ಗಣಪತಿ ಮಾನಿಗದ್ದೆ, ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.