ಹಂದಿಗೋಣದಲ್ಲಿ ಮನೆಗಳಿಗೆ ನೀರು ನುಗ್ಗುವುದು. 
ಉತ್ತರ ಕನ್ನಡ

ಹಂದಿಗೋಣಕ್ಕೆ ತಪ್ಪದ ಜಲಾವೃತ ಭೀತಿ

ಕುಮಟಾ: ತಾಲೂಕಿನ ಕಲಭಾಗ ಪಂಚಾಯಿತಿ ವ್ಯಾಪ್ತಿಯ ಹಂದಿಗೋಣ ಗ್ರಾಮದ ಹಲವು ಭಾಗಗಳಲ್ಲಿ ಜನರು ಪ್ರತಿವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುವ ಸಂಕಟ ಎದುರಿಸುತ್ತಿದ್ದರೂ ಸ್ಥಳಿಯ ಆಡಳಿತವಾಗಲಿ, ತಾಲೂಕಾಡಳಿತವಾಗಲಿ ಸಮಸ್ಯೆ ಪರಿಹರಿಸುವ ಸ್ಪಷ್ಟ ಕ್ರಮಗಳನ್ನುಈವರೆಗೂ ಕೈಗೆತ್ತಿಕೊಂಡಿಲ್ಲ.
ಹಂದಿಗೋಣ ಗ್ರಾಮದ ಜನರು ಕಳೆದ 3&4 ವರ್ಷಗಳಿಂದ ಮಳೆಗಾಲದಲ್ಲಿ ಜಲಸಂಕಟ ಎದುರಿಸುತ್ತಿದ್ದಾರೆ. ಒಂದೆಡೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ಅವೈಜ್ಞಾನಿಕ ಕ್ರಮಗಳಿಂದ ಗುಡ್ಡದಿಂದ ಹರಿದು ಬರುವ ದೊಡ್ಡ ಪ್ರಮಾಣದ ನೀರು ಸರಾಗವಾಗಿ ಹರಿಯಲಾಗದೇ ಊರಿನೊಳಗೇ ಕೃತಕ ನೆರೆಯನ್ನು ಸೃಷ್ಟಿಸುತ್ತಿದೆ. ಜನರ ಮನೆ, ತೋಟ, ಗದ್ದೆ ಮಾತ್ರವಲ್ಲದೆ ಹಾಗೂ ರಸ್ತೆಗಳು ಕೂಡಾ ಜಲಾವೃತಗೊಂಡು ಪದೇಪದೆ ಜನಜೀವನ ಅಸ್ತವ್ಯಸ್ತತೆಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಸಮಸ್ಯೆ ಎಷ್ಟೊಂದು ಉಲ್ಬಣಿಸಿದೆ ಎಂದರೆ ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ಉದ್ಭವಿಸುತ್ತದೆ ಎನ್ನುತ್ತಾರೆ ಸ್ಥಳಿಯರು.
ಈ ಬಗ್ಗೆ ಹಂದಿಗೋಣದ ಜಲಸಂತ್ರಸ್ತರು ಕಲಭಾಗ ಗ್ರಾಮ ಪಂಚಾಯಿತಿಗೆ ಮೌಖಿಕ ಹಾಗೂ ಲಿಖಿತ ರೂಪದಲ್ಲೂ ಸಮಸ್ಯೆ ತಿಳಿಸಿದ್ದರು. ಅಧಿಕಾರಿಗಳು ಬಂದು ಸಮಸ್ಯೆ ಕಣ್ಣಾರೆ ಕಂಡು ಹೋಗಿದ್ದಾರೆ. ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ಉತ್ತರಿಸಿ ಜಾರಿಕೊಳ್ಳುತ್ತಾರೆಯೇ ಹೊರತು ಈವರೆಗೆ ಕ್ರಮವಾಗಿಲ್ಲ ಎಂದು ಸ್ಥಳಿಯರು "ವಿಜಯವಾಣಿ'ಯೊಂದಿಗೆ ಸಮಸ್ಯೆ ತೋಡಿಕೊಂಡಿದ್ದಾರೆ.