ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗುರುವಾರ ಪೊಲೀಸ್ ಪರೇಡ್ ನಡೆಸಲಾಯಿತು 
ಉತ್ತರ ಕನ್ನಡ

ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ

ವಿನಯ ಆಶೋಕ ನಾಯ್ಕ
ಭಟ್ಕಳ: ತಾಲೂಕಿನ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರಧ್ವಜಾರೋಹಣ ನೆರವೇರುವು ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ಮಾ. 27ರಂದು ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
ಮಾ. 27ರಂದು ರಥಾರೋಹಣ ನಡೆಯಲಿದ್ದು, ಸಂಜೆ 5 ಗಂಟೆಗೆ ಸಾವಿರಾರು ಭಕ್ತರ ಜಯಘೋಷದ ನಡುವೆ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮಾ. 28ರಂದು ಅಶ್ವ ವಾಹನೋತ್ಸವ, ಚೂರ್ಣೋತ್ಸವ ಹಾಗೂ ಅವಭ್ರಥದೊಂದಿಗೆ ಜಾತ್ರೆಗೆ ಸಮಾರೋಪ ನಡೆಯಲಿದೆ. ಇದೇ ದಿನ ರಾತ್ರಿ 9 ಗಂಟೆಗೆ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ನಗರಸಭೆ ಪೌರಾಯುಕ್ತ ಬಾಬಾಸಾಹೇಬ್ ಮಾನೆ ದೇವಸ್ಥಾನಕ್ಕೆ ಭೇಟಿ ನೀಡಿ, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್
ಜಾತ್ರೆಯ ಭದ್ರತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾರ್ಗದರ್ಶನದಲ್ಲಿ ಭಟ್ಕಳ ಉಪವಲಯ ಪೊಲೀಸ್ ನಿರೀಕ್ಷಕ ಗಿರೀಶ ಬಿ. ನೇತೃತ್ವದಲ್ಲಿ ಸಿಪಿಐ ದಿವಾಕರ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ. ಮೂವರು ಡಿವೈಎಸ್ಪಿಗಳೊಂದಿಗೆ 270ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಆಯ್ದ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆನ್ನಪಟ್ಟಣ ಜಾತ್ರೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದಲೂ ಹೆಚ್ಚುವರಿ ಪಡೆಗಳನ್ನು ಕರೆಯಿಸಲಾಗಿದೆ. ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗುರುವಾರ ಪೊಲೀಸ್ ಪರೇಡ್ ನಡೆಸಲಾಗಿದೆ. ಈ ಸಂದರ್ಭದಲ್ಲಿ ಡಿವೈಎಸ್ಪಿ ಗಿರೀಶ, ಸಿಪಿಐ ದಿವಾಕರ ಪಿ.ಎಂ., ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ ಎಸ್. ಮುರ್ನಾಲ್ ಹಾಗೂ ನಗರ ಠಾಣೆ ಪಿಎಸೈ ನವೀನ್ ಎಸ್. ನಾಯ್ಕ ಇತರರು ಉಪಸ್ಥಿತರಿದ್ದರು.