ಮುಂಡಗೋಡನಲ್ಲಿ ಭಾನುವಾರ ಟಿಬೇಟಿಯನ್ ಧರ್ಮಗುರು ದಲೈಲಾಮಾ (Dalailama)ಅವರನ್ನು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಅಲ್ಪಸಂಖ್ಯಾತ ವ್ಯವಹಾರ ಸಚಿವ ಕಿರಣ ರಿಜಿಜು ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾದರು.
ಮುಂಡಗೋಡ: ಭಗವಾನ್ ಬುದ್ಧರ ತತ್ವಗಳನ್ನು ಹಾಗೂ ನಳಂದ ಶಿಕ್ಷಣ ವ್ಯವಸ್ಥೆಯನ್ನು ಜಗತ್ತಿಗೇ ಪ್ರಸಾರ ಮಾಡುವಲ್ಲಿ ಟಿಬೇಟಿಯನ್ ಕ್ಯಾಂಪ್‌ನ ಬೌದ್ಧ ಸನ್ಯಾಸ ವಿಹಾರಗಳ ಕೊಡುಗೆ ಅಪಾರ ಎಂದು ಸಂಸದೀಯ ಮತ್ತು ಅಲ್ಪಸಂಖ್ಯಾತರ ವ್ಯವಹಾರ ಸಚಿವ ಕಿರಣ್ ರಿಜಿಜು ಹೇಳಿದರು.
ಇಲ್ಲಿನ ಟಿಬೇಟಿಯನ್ ಕ್ಯಾಂಪ್‌ನ ಡ್ರೆಪುಲ್ ಲಾಸೆಲಿಂಗ್ ಮಾನೆಸ್ಟ್ರಿ ಯಲ್ಲಿ ಆಯೋಜಿಸಿದ್ದ ದಲೈ ಲಾಮ (Dalailama) ಅವರ 90ನೇ ಜನ್ಮದಿನದ ವಾರ್ಷಿಕೋತ್ಸವ ಹಾಗೂ ಬೌದ್ಧ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಆಚಾರ್ಯ ಲೆಕ್ಡೆನ್ ಅವರಿಂದ ಕ್ರಿ.ಶ. 1416ರಲ್ಲಿ ಟಿಬೇಟ್‌ನಲ್ಲಿ ಈ ಮಾನೆಸ್ಟ್ರಿ ಸ್ಥಾಪನೆ ಆಯಿತು.
ಕೇವಲ ಭಾರತೀಯರು ಮಾತ್ರವಲ್ಲ ಮಂಗೋಲಿಯಾ, ಚೀನಾ, ಸೌತ್ ಕೋರಿಯಾ, ಥೈವಾನ್, ಅಮೆರಿಕ ಹೀಗೆ ವಿಶ್ವದ ನಾನಾ ದೇಶಗಳಿಂದ ಇಲ್ಲಿಗೆ ಅಧ್ಯಯನಕ್ಕೆ ಬೌದ್ಧ ಬಿಕ್ಕುಗಳು ಬರುತ್ತಾರೆ.
ಧರ್ಮದ ಸಾರವನ್ನು ಅಧ್ಯಯನ ಮಾಡಿ ವಿಶ್ವಕ್ಕೆ ಸಾರುತ್ತಿರುವ ಪ್ರತಿಯೊಬ್ಬ ಸನ್ಯಾಸಿಗಳಿಗೆ, ಬಿಕ್ಕುಗಳಿಗೆ ಧನ್ಯವಾದ ತಿಳಿಸುತ್ತೇನೆ.
ಬೌದ್ಧ ವಿಹಾರಗಳಿಗೆ, ಟಿಬೇಟಿಯನ್ ಪ್ರಜೆಗಳಿಗೆ ಭಾರತ ಸರ್ಕಾರ ಸಹಾಯ ಮಾಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬೌದ್ಧ ಧರ್ಮದ ವಿಚಾರಗಳನ್ನು ಅಳವಡಿಸಿಕೊಂಡು ಇಲ್ಲಿಯವರೆಗೂ ಬಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ಅವುಗಳನ್ನು ಮುಂದುವರಿಸಿಕೊಂಡು ಸಾಗೋಣ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ 90ನೇ ವರ್ಷದ ಹುಟ್ಟುಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ, ಡಿವೈಎಸ್‌ಪಿ ಗೀತಾ ಪಾಟೀಲ, ತಹಸೀಲ್ದಾರ್ ಶಂಕರ ಗೌಡಿ, ತಾಪಂ ಅಧಿಕಾರಿ ಟಿ.ವೈ.ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ, ಸ್ಥಳಿಯ ಮುಖಂಡರಾದ ಎಚ್.ಎಂ. ನಾಯ್ಕ, ರವಿಗೌಡ ಪಾಟೀಲ, ಕೃಷ್ಣ ಹೀರಳ್ಳಿ, ಸಿದ್ದಪ್ಪ ಹಡಪದ, ಕೆಂಜೋಡಿ ಗಲಬಿ, ಜ್ಞಾನದೇವ ಗುಡಿಯಾಳ, ಪರಶುರಾಮ ತಹಶೀಲ್ದಾರ್, ವೈ.ಪಿ. ಭುಜಂಗಿ, ರಾಮಣ್ಣ ಲಮಾಣಿ,ಪ್ರಶಾಂತ ಲಮಾಣಿ ಇತರರಿದ್ದರು.