ಮಾಡಿದ ಡಾಂಬರು ರಸ್ತೆಯನ್ನು ಜೆಸಿಬಿ ಮೂಲಕ ಕೀಳಲಾಯಿತು.
ಕಾರವಾರ ವಿವಿಧೆಡೆ ರಸ್ತೆ ಹಾಳಾಗಿದೆ ಸರಿಪಡಿಸಬೇಕು ಎಂದು ಆಗ್ರಹಿಸುವುದು ಸಾಮಾನ್ಯ. ಆದರೆ, ಇಲ್ಲಿ ಸರಿಯಾಗಿರುವ ರಸ್ತೆಯನ್ನು ಗುತ್ತಿಗೆದಾರನೊಬ್ಬ ಹಾಳು ಮಾಡಿದ್ದಾನೆ!!
ಸುಸಜ್ಜಿತ ಸಿಮೆಂಟ್ ರಸ್ತೆಯ ಮೇಲೆ ಡಾಂಬರು ಹಾಕಿ ಎಡವಟ್ಟು ಮಾಡಿದ ಘಟನೆ ನಗರದ ಹಬ್ಬುವಾಡದಲ್ಲಿ ಮಂಗಳವಾರ ನಡೆದಿದೆ. ಬುಧವಾರ ಮತ್ತೆ ಅದನ್ನು ತೆರವು ಮಾಡಿ ಇನ್ನಷ್ಟು ಅವಗಢ ಸಂಭವಿಸುವಂತೆ ಮಾಡಿದ್ದಾನೆ.
ಗೀತಾಂಜಲಿ ಚಿತ್ರ ಮಂದಿರದಿಂದ ಹಬ್ಬುವಾಡ ಇಸ್ಕನ್ ದೇವಾಲಯ ಕ್ರಾಸ್‌ವರೆಗೆ 2023 ರಲ್ಲೇ ಸಿಮೆಂಟ್ ರಸ್ತೆ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಮಂಗಳವಾರ ಬೆಳಗ್ಗೆ ಇಸ್ಕಾನ್ ಕ್ರಾಸ್ ಸಮೀಪದಿಂದ ಇದ್ದಕ್ಕಿದ್ದಂತೆ ಟಿಪ್ಪರ್‌ಗಳು ಬಂದು ಸಿಮೆಂಟ್ ರಸ್ತೆಯ ಮೇಲೆಯೇ ಡಾಂಬರು, ಜಲ್ಲಿ ಮಿಶ್ರಣವನ್ನು ಸುರುವಿದ್ದವು. ಕೆಲವು ಕಾರ್ಮಿಕರು, ಬಂದು ಅದನ್ನು ಹರಡಿದರು. ದೊಡ್ಡ ರೋಲರ್ ಯಂತ್ರಗಳು ಬಂದು ಅವುಗಳನ್ನು ಘಟ್ಟಿ ಮಾಡಲು ಶುರುವಾಡಿದವು.
ರಸ್ತೆಯ ಮೇಲೆ ಓಡಾಡುವ ಜನರಿಗೆ ಅಚ್ಚರಿ. ಇದ್ಯಾವುದೋ ಹೊಸ ತಂತ್ರಜ್ಞಾನವಿರಬೇಕು ಎಂದು ಕೆಲವರು ಸುಮ್ಮನೇ ಹೋದರು. ಇನ್ನು ಕೆಲವರು ನಗರಸಭೆಗೆ, ಪಿಡಬ್ಲುಡಿ ಅಧಿಕಾರಿಗಳಿಗೆ ಕರೆ ಮಾಡಿ ಹೇಳಿದರು. ನಗರಸಭೆ, ಪಿಡಬ್ಲುಡಿ ಅಽಕಾರಿಗಳು ತಾವ್ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂಬ ಉತ್ತರ ಬಂತು. ಹಾಗಿದ್ದರೆ ರಸ್ತೆ ಮಾಡುತ್ತಿರುವರ‍್ಯಾರು ಎಂದು ತಿಳಿಯದೇ ಜನ ಗೊಂದಲಕ್ಕೀಡಾದರು. ಅಷ್ಟು ಹೊತ್ತಿಗಾಗಲೇ ಕಾರ್ಮಿಕರು ಸಾಕಷ್ಟು ದೂರದವರೆಗೆ ಮೊದಲ ಹಾಸಿನ ಡಾಂಬರು ಹಾಕಿ ಮುಗಿಸಿದ್ದರು.'
ಕೆಲ ಹೊತ್ತಿನ ನಂತರ ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸದಾನಂದ ಸಾಲೇಹಿತ್ತಲ ಆಗಮಿಸಿ ತಮ್ಮ ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿ, ಡಾಂಬರು ಕಾಮಗಾರಿಯನ್ನು ತಡೆದರು. ಕಾಮಗಾರಿ ಕೈಗೊಂಡಿರುವ ಗುತ್ತಿಗೆ ಕಂಪನಿಯ ಸುಪ್ರವೈಸರ್ ಬಳಿ ಕಾರ್ಯಾದೇಶ ಕೇಳಿದರೆ ಅದೂ ಇರಲಿಲ್ಲ. ಅದನ್ನು ತರುತ್ತೇನೆ ಎಂದು ಹೋದ ಸುಪ್ರವೈಸರ್ ನಾಪತ್ತೆಯಾಗಿದ್ದ.
ಆಗಿದ್ದೇನು..?
ಲೋಕೋಪಯೋಗಿ ಇಲಾಖೆಯ ಭಾಗವಾಗಿರುವ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆ-ಶಿಪ್) ಅಡಿ ಹೆದ್ದಾರಿಗಳಲ್ಲಿ ಅಪಘಾತ ವಲಯವನ್ನು ಸರಿಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ತಾಲೂಕುಗಳಲ್ಲಿ ಈ ಕಾಮಗಾರಿಯನ್ನು ವಿಜಯಪುರದ ಗುತ್ತಿಗೆದಾರರೊಬ್ಬರು ಪಡೆದುಕೊಂಡಿದ್ದಾರೆ. ಅದರಲ್ಲಿ ಕಾರವಾರದ ನಗರದಲ್ಲಿ 1.4 ಕಿಮೀ ಕಾಮಗಾರಿಯೂ ಸೇರಿದೆ ಎಂಬುದು ಸುಪ್ರವೈಸರ್ ಹೇಳುವ ಮಾತು. ಆದರೆ, ಇದೇ ರಸ್ತೆ ಕಾಮಗಾರಿಯೋ ಬೇರೆ ರಸ್ತೆಯೋ ಎಂಬುದು ಅವರಿಗೂ ಸ್ಪಷ್ಟತೆ ಇಲ್ಲ. ಕೆ-ಶಿಪ್ ಯಾವುದೇ ಅಽಕಾರಿಗಳು ಬಂದಿಲ್ಲ.
ಪಿಡಬ್ಲುಡಿ ಎಇಇ ರಾಮು ಅರ್ಗೇಕರ್, `ಹಬ್ಬುವಡ ರಸ್ತೆ ನಗರಸಭೆಗೆ ಸೇರಿದೆ. ಒಪ್ಪಂದ ಮಾಡಿಕೊಂಡು ಒಂದು ಬಾರಿಗೆ ಅಭಿವೃದ್ಧಿ ಮಾಡಿಕೊಟ್ಟಿದ್ದೇವೆ. ಈ ಕಾಮಗಾರಿ ಕೈಗೊಳ್ಳುವ ಬಗ್ಗೆ ನಮಗೆ ಯಾರೂ ಯಾವುದೇ ಕಾರ್ಯಾದೇಶ ನೀಡಿಲ್ಲ. ಎಂದು ಹೇಳಿದರು.
ಕಾರವಾರ ಇಳಕಲ್ ರಾಜ್ಯ ಹೆದ್ದಾರಿ ನಗರ ವ್ಯಾಪ್ತಿಯ ರಸ್ತೆ ನಗರಸಭೆಗೆ ಸೇರಿದೆ. ಲೋಕೋಪಯೋಗಿ ಇಲಾಖೆಗೆ ಒಂದು ಬಾರಿ ಅಭಿವೃದ್ಧಿಗೆ ನೀಡಿದ್ದೆವು. ಇದುವರೆಗೂ ಲೋಕೋಪಯೋಗಿ ಇಲಾಖೆಯ ನಿರ್ವಹಣೆಯ ಕಾಲಾವಧಿ ಮುಗಿದಿಲ್ಲ. ಈಗ ಕೆ-ಶಿಪ್ ಕಾಮಗಾರಿ ಎಂದು ಹೇಳಿಕೊಂಡು ಕೆಲವು ಕಾರ್ಮಿಕರು ಬಂದು ಡಾಂಬರು ಹಾಕಿದ್ದರೆ, ಅದನ್ನು ತೆಗೆಯಲೂ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ನಿಲ್ಲಿಸಿದ್ದೇವೆ.
ಸದಾನಂದ ಸಾಲೇಹಿತ್ತ ನಗರಸಭೆ ಎಇಇ