- ಇಬ್ಬರು ಸಾವು
- ಲಾರಿ ಬಡಿದು ಕಾರು ಜಕಂ
ಯಲ್ಲಾಪುರ: ಸರಣಿ ಅಪಘಾತವೊಂದರಲ್ಲಿ ಇಬ್ಬರು ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 52 ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮಹಾರಾಷ್ಟ್ರದ ಪುಣೆಯ ತ್ರಿವೇಣಿನಗರದ ಮೃಣ್ಮಣಿ ರಾಜನ್ ಕುಲ್ತೆ (32) ಹಾಗೂ ಶರ್ಮಿಳಾ ರಾಜನ್ ಕುಲ್ತೆ (59) ಮೃತರು.
ಪ್ರವಾಸಕ್ಕೆಂದು ಬಾಡಿಗೆ ಕಾರಿನಲ್ಲಿ ಬಂದಿದ್ದ ಇವರು ಬಾದಾಮಿಯಿಂದ ಗೋಕರ್ಣಕ್ಕೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಕಾರಿನ ಹಿಂಬದಿಯಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಹೋಗಿ ಅಪ್ಪಳಿಸಿದೆ. ಎರಡೂ ಲಾರಿಗಳ ನಡುವೆ ಸಿಲುಕಿ ಕಾರು ನುಜ್ಜುಗುಜ್ಜಾಗಿದೆ. ಮುಂದಿನಿಂದ ಸಾಗುತ್ತಿದ್ದ ಇನ್ನೊಂದು ಕಾರು ಸಹ ಅಪಘಾತದ ರಭಸಕ್ಕೆ ಜಖಂಗೊಂಡಿದೆ.
ಕಾರಿನಲ್ಲಿ ಸಿಲುಕಿ ಇಬ್ಬರು ಮೃತಪಟ್ಟರೆ, ಚಾಲಕ ಹೊಸಕೋಟೆಯ ಆಲಂ ಪಾಷಾ ವಲಿಸಾನ ಶೇಖ್ ಗಾಯಗೊಂಡಿದ್ದಾರೆ. ಗಾಯಾಳು ಚಾಲಕನನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ತಾಸುಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಅಪಘಾತಗೊಂಡ ವಾಹನಗಳ ತೆರವಿಗೆ ಕ್ರಮ ಕೈಗೊಂಡು ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.