ಶಿರಸಿಯ ಸಹಕಾರಿ ಸಂಘದ ಅಂಗಳಕ್ಕೆ ಟೆಂಡರ್‌ಗಾಗಿ ರೈತರು ತಂದಿರುವ ಹಸಿ ಅಡಕೆ (Raw Areca)
- ಆರಂಭದಲ್ಲಿಯೇ ಉತ್ತಮ ಬೆಲೆ
- ರೈತರ ಮುಖದಲ್ಲಿ ಮಂದಹಾಸ
- ಕೃಷಿ ಕಾರ್ಮಿಕರ ಕೊರತೆ
ಶಿರಸಿ: ಹಸಿ ಅಡಕೆ (Raw Areca) ಟೆಂಡರ್ ಪ್ರಕ್ರಿಯೆ ನಗರದ ಸಹಕಾರ ಸಂಘಗಳಲ್ಲಿ ನಿಧಾನವಾಗಿ ಆರಂಭಗೊಂಡಿದೆ. ಆರಂಭದಲ್ಲಿಯೇ ಉತ್ತಮ ಬೆಲೆ ಲಭಿಸುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಎರಡು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಅಡಕೆಗೆ ಉತ್ತಮ ದರ ಲಭಿಸುತ್ತಿದೆ. ಇದರ ಪರಿಣಾಮ ಹಸಿ ಅಡಕೆಯ ಮೇಲೂ ಆಗಿದ್ದು, ಟೆಂಡರ್‌ನಲ್ಲಿ ಹೆಚ್ಚಿನ ದರ ಪಡೆದುಕೊಳ್ಳಲಾರಂಭಿಸಿದೆ.
ಈ ವರ್ಷ ಆರಂಭದಲ್ಲಿಯೇ ಕಳೆದ ವರ್ಷ ಹಸಿ ಅಡಕೆಗೆ ಸಿಕ್ಕ ಸರಾಸರಿ ದರಕ್ಕಿಂತ ಪ್ರತಿ ಕ್ವಿಂಟಾಲ್‌ಗೆ 1500 ರೂ. ಗಳಿಂದ 2 ಸಾವಿರ ರೂ. ಗಳಿಗೂ ಹೆಚ್ಚಿಗೆ ಲಭಿಸುತ್ತಿದೆ.
ಮುಂದಿನ ದಿನಗಳಲ್ಲಿ ಈ ದರ ಇನ್ನೂ ಹೆಚ್ಚಾಗುವ ನಿರೀಕ್ಷೆಯಲ್ಲಿ ರೈತರು ಹಾಗೂ ಸಹಕಾರಿ ಸಂಘಗಳಿವೆ.
ನವೆಂಬರ್ ಅಂತ್ಯ ಹಾಗೂ ಡಿಸೆಂಬರ್‌ನಲ್ಲಿ ಅಡಕೆ ಕಟಾವಿನ ಹಂಗಾಮು ಜೋರಾಗುತ್ತದೆ. ಮಲೆನಾಡಿನಲ್ಲಿ ಅನಾದಿ ಕಾಲದಿಂದಲೂ ಇದೇ ಮಾದರಿಯಲ್ಲಿ ಅಡಕೆ ಇಳಿಸುವ ಕಾರ್ಯ ನಡೆಸಿ ಬಳಿಕ ರೈತರೇ ಸಂಸ್ಕರಿಸುತ್ತಿದ್ದರು.
ಗೋಟಡಕೆಯಾದರೆ 45 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಆ ಬಳಿಕ ಸುಲಿದು ಮಾರುಕಟ್ಟೆಗೆ ರೈತರು ತರುತ್ತಿದ್ದರು. ಕಾಯಿ ಅಡಕೆಯಾದರೆ ಮರದಿಂದ ಇಳಿಸಿದ ಒಂದೆರಡು ದಿನಗಳಲ್ಲಿಯೇ ಅದನ್ನು ಸುಲಿದು, ಬೇಯಿಸಿ, ಒಂದು ವಾರ ಒಣಗಿಸಿ ರಾಶಿ ಅಡಕೆಯನ್ನಾಗಿ ಸಿದ್ಧಪಡಿಸಿ ಬಳಿಕ ಮಾರುಕಟ್ಟೆಗೆ ತರುತ್ತಿದ್ದರು.
10 ವರ್ಷಗಳ ಈಚೆ ಮಲೆನಾಡಿನ ತಾಲೂಕುಗಳಲ್ಲಿ
ಕೃಷಿ ಕೂಲಿಕಾರ ಕೊರತೆ ಉಂಟಾದ ಬಳಿಕ ಅಡಕೆ ಕಟಾವು ಕಾರ್ಯವನ್ನು ಸರಳಗೊಳಿಸಿದ್ದು, ಈ ಹಸಿ ಅಡಕೆ ಟೆಂಡರ್ ಪದ್ಧತಿ.
ರೈತರು ಅಡಕೆ ಇಳಿಸಿದ ದಿನ ಅಥವಾ ಮಾರನೇ ದಿನ ಲಾರಿಗಳಲ್ಲಿ ತುಂಬಿಕೊಂಡು ಸಹಕಾರಿ ಸಂಘಗಳ ಬಾಗಿಲಿಗೆ ತಂದರೆ ಇಲ್ಲಿ ಟೆಂಡರ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹಕಾರಿ ಸಂಘಗಳು ಕಲ್ಪಿಸಿವೆ. ಒಂದು ಅಂದಾಜಿನ ಪ್ರಕಾರ ಶಿರಸಿ, ಸಿದ್ದಾಪುರ ತಾಲೂಕಿನಲ್ಲಿ ಕಳೆದ ವರ್ಷ ಶೇ. 25ರಷ್ಟು ಅಡಕೆ ಬೆಳೆ ಹಸಿ ಅಡಕೆ ಟೆಂಡರ್ ಮೂಲಕವೇ ಮಾರಾಟವಾಗಿದೆ.
ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ ಸರಾಸರಿ 5 ಸಾವಿರ ರೂ. ದರ ಪಡೆದಿದ್ದ ಹಸಿ ಗೋಟಡಕೆ ಗುರುವಾರದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 7019 ರೂ.ಗಳವರೆಗೆ ದರ ಪಡೆದಿದೆ.
ಅದೇ ರೀತಿ ಕಾಯಡಕೆ ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ 4 ಸಾವಿರದಿಂದ 4500 ರೂ. ಪಡೆಯುತ್ತಿದ್ದರೆ ಈಗ 6055 ರೂ. ದರಕ್ಕೆ ಮಾರಾಟವಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಹಸಿ ಅಡಕೆಯನ್ನು ಟೆಂಡರ್ ಮೂಲಕ ಖರೀದಿಸಲು ಹೊರ ಜಿಲ್ಲೆಯ ವರ್ತಕರು ಆಗಮಿಸುತ್ತಿಲ್ಲ.
ಸ್ಥಳೀಯ ವರ್ತಕರೇ ಈ ದರದಲ್ಲಿ ಖರೀದಿಸುತ್ತಿದ್ದಾರೆ. ಟಿಎಸ್‌ಎಸ್, ಟಿಎಂಎಸ್ ಸೇರಿದಂತೆ ಪ್ರಮುಖ ಸಹಕಾರಿ ಸಂಸ್ಥೆಗಳು ಸೋಮವಾರದಿಂದ ಬೃಹತ್ ಪ್ರಮಾಣದಲ್ಲಿ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಆ ಬಳಿಕ ಜಿಲ್ಲೆಯ ಹೊರಗಿನ ವರ್ತಕರೂ ಸಹ ಟೆಂಡರ್‌ನಲ್ಲಿ ಭಾಗವಹಿಸಿ ಸ್ಪರ್ಧೆ ಏರ್ಪಟ್ಟು ರೈತರಿಗೆ ಹೆಚ್ಚಿನ ಲಾಭ ಸಿಗಬಹುದು ಎಂಬ ನಿರೀಕ್ಷೆ ಇದೆ.
ನಿರಾಸೆ ಅನುಭವಿಸಿದ ಗಡಿ ಭಾಗದ ರೈತರು
ತಾಲೂಕಿನ ಬನವಾಸಿ ಹಾಗೂ ಸುತ್ತಮುತ್ತಲಿನ ಶಿವಮೊಗ್ಗ ಜಿಲ್ಲೆಯ ರೈತರೂ ಸಹ ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಭತ್ತದ ಬೆಳೆ ಬದಲಾಗಿ ಅಡಕೆ ಬೆಳೆಯಲಾರಂಭಿಸಿದ್ದಾರೆ.
ಆದರೆ, ಅಡಕೆ ಸಂಸ್ಕರಣೆಯನ್ನು ಇಲ್ಲಿಯ ರೈತರು ಮಾಡದೇ ತಮ್ಮ ಅಡಕೆ ತೋಟವನ್ನು ಗುತ್ತಿಗೆ ನೀಡುವ ಪದ್ಧತಿ ಬೆಳೆಸಿಕೊಂಡಿದ್ದಾರೆ. ಗಣೇಶ ಚತುರ್ಥಿ ಮುಕ್ತಾಯವಾಗುತ್ತಿದ್ದಂತೆಯೇ ತಮ್ಮ ಅಡಕೆ ತೋಟದಲ್ಲಿ ಮರಗಳ ಮೇಲಿರುವ ಅಡಕೆ ಗೊನೆಯನ್ನೇ ಗುತ್ತಿಗೆ ಆಧಾರದಲ್ಲಿ ಮಾರಾಟ ಮಾಡುತ್ತಾರೆ.
ಈ ರೀತಿ ತೋಟ ಗುತ್ತಿಗೆ ಪಡೆದವರೇ ತೋಟ ನಿರ್ವಹಣೆ ಮಾಡಿಕೊಂಡು ನಿಗದಿತ ಸಮಯದಲ್ಲಿ ಫಸಲು ಕಟಾವು ಮಾಡಿಕೊಳ್ಳುತ್ತಾರೆ. ಈ ವರ್ಷ ಗಣೇಶ ಚತುರ್ಥಿಯ ವೇಳೆ ಅಡಕೆಗೆ ಗಮನಸೆಳೆಯಬಹುದಾದ ದರ ಇರಲಿಲ್ಲ. ಹೀಗಾಗಿ ಅಡಕೆ ಫಸಲನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿಕೊಂಡ ಗಡಿಭಾಗದ ರೈತರು ಈಗ ದರ ಏರಿದ್ದನ್ನು ಕಂಡು ಕೈ ಕೈ ಹೊಸಕಿಕೊಳ್ಳುತ್ತಿದ್ದಾರೆ.
ಈ ವರ್ಷ ಮಳೆಯ ಕಾರಣದಿಂದಾಗಿ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದರೂ ಆರಂಭದಲ್ಲಿಯೇ ರೈತರಿಗೆ ಉತ್ತಮ ದರ ಲಭಿಸುತ್ತಿದೆ. ಜಿಲ್ಲೆಯ ಹೊರ ಭಾಗದ ವರ್ತಕರೂ ಆಗಮಿಸಿ ಟೆಂಡರ್ ಬರೆಯಲಾರಂಭಿಸಿದ ಬಳಿಕ ಇನ್ನೂ ಉತ್ತಮ ದರ ಸಿಗಬಹುದು ಎಂಬ ನಿರೀಕ್ಷೆ ಇದೆ.