ಬೇಡ್ತಿ ನದಿ  
ಉತ್ತರ ಕನ್ನಡ

ಬೇಡ್ತಿ-ವರದಾ ಜೋಡಣೆ ಡ್ರೋನ್‌ ಸರ್ವೇಗೆ ಟೆಂಡರ್‌

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕನ್ನಡದ ಜನರಿಂದ ತೀವ್ರ ವಿರೋಧ
  • ಬರುವ ಬೇಸಿಗೆಯಲ್ಲಿ ಸರ್ವೇ ನಡೆಯುವ ಸಾಧ್ಯತೆ
ಕಾರವಾರ:

ಉತ್ತರ ಕನ್ನಡದ ಜನರ ಸಾಕಷ್ಟು ವಿರೋಧದ ನಡುವೆಯೂ ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್ ತಯಾರಿಕೆಗೆ ಸರ್ಕಾರ ಬರದಿಂದ ತಯಾರಿ ನಡೆಸಿದ್ದು, ನದಿ ತೀರದ ಜನರ ಆತಂಕ ಹಾಗೂ ಆಕ್ಷೇಪಕ್ಕೆ ಕಾರಣವಾಗಿದೆ.

ಯೋಜನಾ ಪ್ರದೇಶದ ಡ್ರೋನ್ ಸರ್ವೇ ನಡೆಸಲು ಪೂರ್ವ ಸಿದ್ಧತೆಗಾಗಿ ಜುಲೈನಲ್ಲಿ ಟೆಂಡರ್ ಕರೆಯಲಾಗಿದ್ದು, ಇದೇ ಆಗಸ್ಟ್ ನಲ್ಲಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಮೈಸೂರಿನ ಇಂಜಿನಿಯರಿಂಗ್ ರೀಸರ್ಚ್ ಸ್ಟೇಷನ್ ಟೆಂಡರ್ ಕರೆದಿದೆ. ಕಾರ್ಯಾದೇಶ ಸಿಕ್ಕಿದ 3 ತಿಂಗಳೊಳಗೆ ಕಾಮಗಾರಿ ಮುಗಿಸಬೇಕಿದ್ದು, ಇದೇ ಮಳೆಗಾಲ ಮುಗಿಯುತ್ತಿದ್ದಂತೆ ಗ್ರೌಂಡ್ ಕಂಟ್ರೋಲ್ ಸ್ಟೇಷನ್ ಸಿದ್ಧ ಮಾಡುವುದು, ಜಿಪಿಎಸ್ ಪಾಯಿಂಟ್‌ಗಳನ್ನು ಗುರುತಿಸುವಿಕೆ ಮುಂತಾದ ಸಿದ್ಧತೆಗಳು ಪ್ರಾರಂಭಿಸಲಾಗುವುದು. ಬೇಸಿಗೆಯಲ್ಲಿ ಶಿರಸಿ ಹಾಗೂ ಯಲ್ಲಾಪುರ ತಾಲೂಕುಗಳ ಯೋಜನಾ ಪ್ರದೇಶದಲ್ಲಿ ಸರ್ವೇ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್ ತಯಾರಿಕೆಗೆ ಹಾಲಿ ಸಿಎಂ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಕೆಲ ತಿಂಗಳ ಹಿಂದೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲುಡಿಎ)ಗೆ ಒಪ್ಪಿಗೆ ನೀಡಿದ್ದರು. ಅದರಂತೆ ಎನ್‌ಡಬ್ಲುಡಿಎ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಪ್ರಾರಂಭಿಸಿದ್ದು, ಅದರ ಭಾಗವಾಗಿ ಅಧಿಕಾರಿಗಳು ತಿಂಗಳ ಹಿಂದೆ ಬೇಡ್ತಿ ನದಿಯ ಪ್ರದೇಶಗಳಿಗೆ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದರು. ಈಗ ಡ್ರೋನ್ ಸರ್ವೇ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ. ಅದಕ್ಕೆ ಜಲ ಸಂಪನ್ಮೂಲ ಇಲಾಖೆ ಬೆಂಬಲ ನೀಡುತ್ತಿದೆ.

ಯೋಜನೆ ಏನು..?

ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ಶೇ.90 ರಷ್ಟು ಎಂದರೆ 90 ಸಾವಿರ ಕೋಟಿಗಳನ್ನು ಈ ಯೋಜನೆಗೆ ನೀಡಲಿದೆ. ರಾಜ್ಯ ಸರ್ಕಾರ 10 ಸಾವಿರ ಕೋಟಿ ನೀಡಲಿದೆ. ಈ ಹಿಂದೆ ಒಂದು ಡಿಪಿಆರ್ ತಯಾರಿಸಲಾಗಿತ್ತು. ಆದರೆ, ಯೋಜನೆ ಜಾರಿಯಾಗದ ಕಾರಣ ಈಗ ಹೊಸ ವಿಸ್ತçತ ಯೋಜನಾ ವರದಿ(ಡಿಪಿಆರ್) ತಯಾರಿಕೆಗೆ ಸರ್ಕಾರ ಮುಂದಾಗಿದೆ.
ಬೇಡ್ತಿ ಹಾಗೂ ಅದರ ಉಪ ನದಿಗಳಾದ ಶಾಲ್ಮಲಾ ಹಾಗೂ ಪಟ್ಟಣದ ಹೊಳೆಗೆ ಅಣೆಕಟ್ಟೆಗಳನ್ನು ಕಟ್ಟಿ , ನೀರನ್ನು ಪಂಪ್ ಮಾಡಿ ವರದಾ ನದಿಯ ಹಿರೇವಡ್ಡತ್ತಿಗೆ ಕೊಂಡೊಯ್ದು ಸೇರಿಸುವ ಯೋಜನೆ ಇದಾಗಿದೆ. ಇದರಿಂದ ಹಾವೇರಿ ಹಾಗೂ ಗದಗ ಜಿಲ್ಲೆಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಲಾಗುತ್ತಿದೆ. ಇಲ್ಲಿಂದ 18 ಟಿಎಂಸಿ ನೀರನ್ನು ಕೊಂಡೊಯ್ಯಲಾಗುವುದು ಎಂದು ಪ್ರಾಥಮಿಕವಾಗಿ ಯೋಜಿಸಲಾಗಿದೆ.

ಸ್ಥಳೀಯರ ತೀವ್ರ ವಿರೋಧ

ಬೇಡ್ತಿ ವರದಾ ನದಿ ಜೋಡಣೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ಶಿರಸಿಯಲ್ಲಿ ಬೃಹತ್ ಸಮಾವೇಶ ಕೈಗೊಂಡು ಯೋಜನೆಗೆ ಜಿಲ್ಲೆಯ ಪ್ರತಿರೋಧವನ್ನು ತೋರಿಸಲಾಗಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಽಗಳು ಪಕ್ಷಾತೀತವಾಗಿ ಒಟ್ಟಾಗಿ ಬೆಂಗಳೂರು ಹಾಗೂ ದೆಹಲಿಗೆ ತೆರಳಿ ಯೋಜನೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈಗ ಪತ್ರ ಚಳುವಳಿ ನಡೆಸಲಾಗುತ್ತಿದೆ. ಇಷ್ಟಾದ ಬಳಿಕವೂ ಈಗ ಡಿಪಿಆರ್ ಪ್ರಕ್ರಿಯೆ ಬರದಿಂದ ಸಾಗಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನಾಭಿಪ್ರಾಯಕ್ಕೆ ಬೆಲೆ ಇಲ್ಲವೇ, ಜನಪ್ರತಿನಿಽಗಳು ಏನು ಮಾಡುತ್ತಿದ್ದಾರೆ ಎಂದು ಜಾಲತಾಣಗಳ ಮೂಲಕ ಪ್ರಶ್ನೆ ಆರಂಭಿಸಿದ್ದಾರೆ.
"

ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಯೋಡಣೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಅದಕ್ಕಾಗಿ ಪತ್ರ ಚಳುವಳಿ ನಡೆಸಲಾಗುತ್ತಿದೆ. ಭಕ್ತರು ಅತಿ ಹೆಚ್ಚು ಸಂಖ್ಯೆಯಲ್ಲಿ ಯೋಜನೆ ವಿರೋಽಸಿ ಸರ್ಕಾರಕ್ಕೆ ಪತ್ರ ಬರೆಯಬೇಕು.

ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಹಾ ಸಂಸ್ಥಾನ

"

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಽಸಿ ವಿವಿಧ ಸ್ವರೂಪದ ಹೋರಾಟಗಳು ನಿರಂತರವಾಗಿ ನಡೆದಿವೆ. ಯಾವುದೇ ಕಾರಣಕ್ಕೂ ಸರ್ವೇ ಕಾರ್ಯ ನಡೆಸಲೂ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ.

ಅನಂತ ಹೆಗಡೆ ಅಶೀಸರ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ

............