ಅಂಕೋಲಾದ ನವಗದ್ದೆ ಬಳಿ ರಾಸಾಯನಿಕ ಅನಿಲ ಸಾಗಿಸುತ್ತಿದ್ದ (methane)ಟ್ಯಾಂಕರ್ ಮಂಗಳವಾರ ಪಲ್ಟಿಯಾಗಿರುವುದು 
ಉತ್ತರ ಕನ್ನಡ

methane ಟ್ಯಾಂಕರ್ ಪಲ್ಟಿ ಮಿಥೇನ್ ಸೋರಿಕೆ

ವಿನಯ ಹೆಗಡೆ
ಅಂಕೋಲಾ: ಗುಜರಾತ್‌ನಿಂದ ಮಂಗಳೂರಿಗೆ ಸಾಗುತ್ತಿದ್ದ ಮಿಥೇನ್ (methane) ತುಂಬಿದ ಟ್ಯಾಂಕರ್ ರಾ.ಹೆ.52ರ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಮಂಗಳವಾರ ಮುಂಜಾನೆ ಪಲ್ಟಿಯಾಗಿದ್ದು, ಮಿಥೇನ್ ಸೋರಿಕೆ ಪರಿಣಾಮ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಅನಿಲ ಸೋರಿಕೆ ಆಗುತ್ತಿರುವುದರಿಂದ ಘಟನಾ ಸ್ಥಳದಲ್ಲಿ ಜನ ಮತ್ತು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಅಂಕೋಲಾ-ಯಲ್ಲಾಪುರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಾಗಿದೆ.
ಅಪಘಾತದಲ್ಲಿ ಗಾಯಗೊಂಡ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಉಪಚಾರಕ್ಕಾಗಿ ಮಣಿಪಾಲಿಗೆ ದಾಖಲಿಸಲಾಗಿದೆ.

ಪ್ರತಿಬಂಧಕಾಜ್ಞೆ ಜಾರಿ

ಪಘಾತದಿಂದ ಮಿಥೇನ್ ಸೋರಿಕೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ತಹಸೀಲ್ದಾರರು ಭೇಟಿ ನೀಡಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರು ಟ್ಯಾಂಕರ್ ಪಲಟಿಯಾದ 1 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಹೊರಡಿಸಿದ್ದಾರೆ. ತಾಂತ್ರಿಕ ಪರಿಣಿತರು ಆಗಮಿಸಿದ ನಂತರ ಟ್ಯಾಂಕರ್ ಮೇಲೆತ್ತುವ ಕೆಲಸ ನಡೆಯಲಿದೆ.

ಬದಲಿ ಮಾರ್ಗ

ಜಿಲ್ಲಾಧಿಕಾರಿಗಳ ಆದೇಶದಂತೆ ಮಿಥೇನ್ ಟ್ಯಾಂಕರ್ ಬಿದ್ದ ಸ್ಥಳದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವ ಜನಿಕರ ಓಡಾಟ ನಿರ್ಬಂಧಿಸಲಾಗಿದೆ. ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮಿಥೇನ್ ಸೋರಿಕೆ ತಡೆಗಟ್ಟಲು ಶ್ರಮ ವಹಿಸುತ್ತಿದ್ದಾರೆ. ತಜ್ಞರು ಬಂದು ಸೋರಿಕೆ ತಡೆಗೆ ಸೂಕ್ತ ವ್ಯವಸ್ಥೆ ಮಾಡುವವರೆಗೆ ಕಾಯಬೇಕಿದೆ.